More

    ಪಶು ಆಸ್ಪತ್ರೆ ಮುಚ್ಚಲು ನಿರ್ಧಾರ: ಹೈನುಗಾರರ ಒತ್ತಾಯ: ಸರ್ಕಾರದ ನಿರ್ಧಾರಕ್ಕೆ ಅಸಾಮಾಧಾನ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಜಾನುವಾರುಗಳ ಸಂಖ್ಯೆ ಕಡಿಮೆ ಇರುವ ಪ್ರದೇಶದ ಪಶು ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು ಈಗಾಗಲೇ ಈ ಬಗ್ಗೆ ಕ್ರಮ ಕೈಗೊಳ್ಳಲು ಸಿದ್ಧತೆಯನ್ನು ನಡೆಸುತ್ತಿದೆ. ಇದು ರೈತಾಪಿ ವರ್ಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದೆರಡು ವರ್ಷಗಳಿಂದ ರಾಜ್ಯದ ಹೈನುಗಾರರು ಏರುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಹೈನುಗಾರಿಕೆಯಲ್ಲಿ ನಷ್ಟ ಅನುಭವಿಸುತ್ತಿದ್ದು, ಈಗಾಗಲೇ ನೂರಾರು ಗ್ರಾಮೀಣ ಭಾಗದ ಕುಟುಂಬಗಳು ಹೈನುಗಾರಿಕೆಯಿಂದ ವಿಮುಖರಾಗುತ್ತಿವೆ. ಇದೀಗ ಪಶು ಚಿಕಿತ್ಸಾಲಯಗಳನ್ನು ಮುಚ್ಚಲು ಸರ್ಕಾರ ಮುಂದಾದ ಪರಿಣಾಮ ರೈತಾಪಿ ವರ್ಗ ಕಂಗಾಲಾಗಿದೆ.

    ಕಳೆದ ವಾರವಷ್ಟೇ ಪ್ರತಿ ಟನ್ ಪಶು ಆಹಾರಕ್ಕೆ 500 ರೂ. ಹೆಚ್ಚಿಸಿರುವುದರಿಂದ ಹಾಗೂ ಆರು ತಿಂಗಳಿನಿಂದ ಪ್ರೋತ್ಸಾಹ ಧನ ಖಾತೆಗೆ ಜಮೆಯಾಗದೆ ಖರ್ಚುವೆಚ್ಚಗಳನ್ನು ಹೊಂದಿಸಿಕೊಳ್ಳಲು ಗ್ರಾಮೀಣ ಭಾಗದ ರೈತಾಪಿ ವರ್ಗ ಹೆಣಗಾಡುತ್ತಿರುವಾಗ ಸರ್ಕಾರ ಈ ರೀತಿಯ ನಿರ್ಧಾರ ಕೈಗೊಂಡಿರುವುದು ರೈತಾಪಿ ವರ್ಗದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

    ಚಿಕಿತ್ಸಾಲಯ ಮುಚ್ಚಿದರೆ ಎಲ್ಲಿ ಹೋಗಬೇಕು?

    ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುವವರ ಮೇಲೆ ಕಳೆದ ಕೆಲ ತಿಂಗಳಿಂದ ಪದೇಪದೆ ಗಾಯದ ಮೇಲೆ ಬರೆ ಎಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೆ ಅಸೌಖ್ಯ ಕಾಡಿದಾಗ ಸ್ಥಳೀಯವಾಗಿ ಸಿಗುವ ಪಶು ಆಸ್ಪತೆಯನ್ನು ಹೈನುಗಾರರು ಸಂಪರ್ಕಿಸುತ್ತಿದ್ದರು. ಆದರೆ ಇದೀಗ ಪಶು ಆಸ್ಪತ್ರೆಯನ್ನೇ ಮುಚ್ಚಿದರೆ ನಾವು ಎಲ್ಲಿ ಹೋಗಬೇಕು ಎಂದು ಹೈನುಗಾರರು ಪ್ರಶ್ನಿಸುತ್ತಿದ್ದಾರೆ. ಪಶು ವೈದ್ಯರ ಕೊರತೆಯಿಂದ ಸಕಾಲದಲ್ಲಿ ಪಶುಗಳಿಗೆ ಚಿಕಿತ್ಸೆಯನ್ನು ಒದಗಿಸಲಾಗದೆ ಸಂಕಟಪಡುತ್ತಿರುವ ಹೈನುಗಾರರಿಗೆ ಇದೀಗ ಹತ್ತಿರದಲ್ಲೇ ಲಭ್ಯವಿರುವ ಪಶು ಚಿಕಿತ್ಸಾಲಯಗಳನು ಮುಚ್ಚಿದರೆ ಮತ್ತಷ್ಟು ತೊಂದರೆಯಾಗುತ್ತದೆ.

    ಇರುವ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ

    ಈಗಾಗಲೇ ರಾಜ್ಯದಲ್ಲಿರುವ ಪಶು ಚಿಕಿತ್ಸಾಲಯಗಳು ಪಶುವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಯಿಂದಾಗಿ ತೀರ ಒತ್ತಡದ ಮಧ್ಯೆ ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಹೈನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶು ಚಿಕಿತ್ಸಾಲಯಗಳಿಗೆ ಪಶು ವೈದ್ಯರನ್ನು ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ರಾಜ್ಯದಾದ್ಯಂತ ಪಶು ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳಲ್ಲಿ ಖಾಲಿ ಇರುವ ಪಶು ವೈದ್ಯರು ಹಾಗೂ ಸಿಬ್ಬಂದಿ ಹುದ್ದೆಗಳನ್ನು ಭರ್ತಿಗೊಳಿಸಬೇಕು ಎನ್ನುವುದು ಹೈನುಗಾರರ ಒತ್ತಾಯವಾಗಿದೆ.

    ಪ್ರೋತ್ಸಾಹ ಧನ ಯಾವಾಗ.?

    ಏರುತ್ತಿರುವ ಪಶು ಆಹಾರ ದರವನ್ನು ಸರಿದೂಗಿಸಲು ನಂದಿನಿ ಪಶು ಆಹಾರಕ್ಕೆ ಪ್ರತಿ ಕೆಜಿಗೆ ಕನಿಷ್ಠ 5 ರೂ.ಸಬ್ಸಿಡಿ ಒದಗಿಸುವ ಮೂಲಕ ಹೈನುಗಾರರಿಗೆ ಪ್ರೋತ್ಸಾಹ ನೀಡುವ ಕೆಲಸ ಸರ್ಕಾರದಿಂದ ಆಗಬೇಕಾಗಿದೆ. ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹ ಧನವನ್ನು ಏಕಗಂಟಿನಲ್ಲಿ ಪಾವತಿ ಮಾಡಿ ಮುಂದಿನ ತಿಂಗಳಿನಿಂದ ಪ್ರತಿ ತಿಂಗಳು ಪ್ರೋತ್ಸಾಹ ಧನ ರೈತರ ಖಾತೆಗೆ ಜಮೆ ಆಗುವಂತೆ ಸರ್ಕಾರ ನೋಡಿಕೊಂಡಲ್ಲಿ ಹೈನುಗಾರರು ನಿಶ್ಚಿಂತೆಯಿಂದ ಹೈನುಗಾರಿಕೆ ಮಾಡಲು ಸಾಧ್ಯವಿದೆ. ಕಳೆದ ಬಜೆಟ್‌ನಲ್ಲಿ ಸರ್ಕಾರ ಪ್ರೋತ್ಸಾಹ ಧನವನ್ನು 5 ರೂಪಾಯಿಯಿಂದ 7 ರೂಪಾಯಿಗೆ ಏರಿಸುತ್ತೇನೆೆಂದು ಭರವಸೆ ನೀಡಿತ್ತು. ಆದರೆ ಅದು ಭರವಸೆಯಾಗಿ ಮಾತ್ರ ಉಳಿದಿದೆ. ಪ್ರೋತ್ಸಾಹ ಧನ ಕನಿಷ್ಠ 10 ರೂಪಾಯಿಗೆ ಏರಿಸಿದರೆ ಮಾತ್ರ ಹೈನುಗಾರಿಕೆ ಉಳಿಯಲು ಸಾಧ್ಯ ಎನ್ನುವುದು ಹೈನುಗಾರರ ಮಾತು.

    ಸಂಘಗಳು ನಷ್ಟದ ಹಾದಿಯಲ್ಲಿ

    ಏರುತ್ತಿರುವ ಪಶು ಆಹಾರದ ಬೆಲೆಯಿಂದ ಹಾಗೂ ವೈದ್ಯರ ಕೊರತೆಯಿಂದ ಹೈನುಗಾರಿಕೆಯಿಂದ ಕೃಷಿಕರು ದೂರ ಸರಿಯುತ್ತಿದ್ದು, ಹಾಲು ಸಂಗ್ರಹದ ಕೊರತೆಯಿಂದಾಗಿ ಈಗಾಗಲೇ ರಾಜ್ಯದ ನೂರಾರು ಹಾಲು ಉತ್ಪಾದಕರ ಸಂಘಗಳು ನಷ್ಟದ ಹಾದಿಯನ್ನು ಹಿಡಿದಿವೆ. ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗೆ ತಿಂಗಳ ಸಂಬಳವನ್ನು ಕೊಡಲು ಕೂಡ ಹೆಣಗಾಡುವ ಸ್ಥಿತಿ ಕೆಲವೊಂದು ಸಂಘಗಳಲ್ಲಿದೆ.

    ಸರ್ಕಾರ ಕೂಡಲೇ ಹೈನುಗಾರರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ತುರ್ತು ಆರ್ಥಿಕ ನೆರವು ಮತ್ತು ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎನ್ನುವುದು ರೈತಪಿ ವರ್ಗದ ಬೇಡಿಕೆಯಾಗಿದೆ.

    ಪಶು ಚಿಕಿತ್ಸಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆ ತೀರಾ ಖಂಡನೀಯ. ಈಗಾಗಲೇ ಬೆಲೆ ಏರಿಕೆ ಸಹಿತ ಇತರ ಹಲವು ಕಾರಣಗಳಿಂದ ನಷ್ಟವನ್ನು ಅನುಭವಿಸುತ್ತಿರುವ ಹೈನುಗಾರರು ಮತ್ತಷ್ಟು ಸಂಕಟವನ್ನು ಅನುಭವಿಸುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.

    -ಸಾಣೂರು ನರಸಿಂಹ ಕಾಮತ್
    ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಠದ ಸಂಚಾಲಕ

    ಜಾನುವಾರುಗಳ ಸಂಖ್ಯೆ ಕಡಿಮೆ ಇರುವ ಪ್ರದೇಶದ ಪಶು ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳನ್ನು ಮುಚ್ಚಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಗ್ರಾಮೀಣ ಭಾಗದ ಹೈನುಗಾರರು ತೊಂದರೆ ಅನುಭವಿಸಬೇಕಾಗಿದೆ. ಆಸ್ಪತ್ರೆಗಳನ್ನು ಮುಚ್ಚಿ ಸಮಸ್ಯೆಯಾಗುವ ಬದಲು ಹೈನುಗಾರರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಮನಸ್ಸು ಮಾಡಬೇಕಾಗಿದೆ.

    -ಸುಧಾಕರ್, ಹೈನುಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts