More

    ಠಾಣೆಗೆ ಶಸ್ತ್ರಾಸ್ತ್ರ ಹಸ್ತಾಂತರಕ್ಕೆ ಆಕ್ಷೇಪ: ವಿನಾಯಿತಿ ನೀಡುವಂತೆ ಜಿಲ್ಲಾಡಳಿತಕ್ಕೆ ಕಾಡಂಚಿನ ರೈತರಿಂದ ಮನವಿ

    -ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

    ಪ್ರತಿ ಚುನಾವಣೆ ಸಂದರ್ಭ ಚುನಾವಣಾ ಆಯೋಗವು ಸುಧಾರಣೆ ನಿಮಿತ್ತ ಹಲವು ಆದೇಶಗಳನ್ನು ಈ ಹಿಂದಿನಿಂದಲೂ ನೀಡುತ್ತ ಬರುತ್ತಿದೆ. ಕೆಲವು ವರ್ಷಗಳ ಹಿಂದಿನ ಅಂತಹ ಒಂದು ಆದೇಶವೇ ಚುನಾವಣಾ ಪ್ರಕ್ರಿಯೆಯ ದಿನಗಳಲ್ಲಿ, ಕೃಷಿ ಬೆಳೆ ರಕ್ಷಣೆಗಾಗಿ ಕೃಷಿಕರು ಪರವಾನಗಿ ಪಡೆದಿರುವ ಕೋವಿಗಳನ್ನು ಠಾಣೆಯಲ್ಲಿ ಇಡಬೇಕೆಂಬುದು.

    ಕಾಡಂಚಿನಲ್ಲಿ ನೆಲೆಸಿರುವ ಬಹುತೇಕ ಕೃಷಿಕರು ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸಲು ಪರವಾನಗಿ ಪಡೆದು ಕೋವಿ ಪಡೆದುಕೊಂಡಿರುತ್ತಾರೆ. ಇದನ್ನು ತಮ್ಮ ರಕ್ಷಣೆ ಹಾಗೂ ಕೃಷಿ ಮತ್ತು ಕೃಷಿ ಭೂಮಿಯಲ್ಲಿರುವ ಬೆಳೆಗಳ ರಕ್ಷಣೆಗಾಗಿ ದಶಕಗಳ ಕಾಲದಿಂದಲೂ ಅನುಭವಿಸಿಕೊಂಡು ಬಂದಿರುತ್ತಾರೆ. ಆದರೆ ಚುನಾವಣೆ ನೆಪದಲ್ಲಿ ಸುಮಾರು ಮೂರು ತಿಂಗಳು ಈ ಕೋವಿಯನ್ನು ಠಾಣೆಯಲ್ಲಿ ಇಡಬೇಕಾದ ಕಾರಣ, ವನ್ಯಜೀವಿಗಳಿಂದ ರಕ್ಷಣೆ ಪಡೆದುಕೊಳ್ಳಲು ಕೃಷಿಕರಿಗೆ ಕಷ್ಟವಾಗುತ್ತಿದೆ. ಈಗಾಗಲೇ ಜಿಲ್ಲೆಯ ಶಿರಾಡಿ, ಉದನೆ, ಮುಂಡಾಜೆ, ಧರ್ಮಸ್ಥಳ, ಪಟ್ರಮೆ, ಕೊಕ್ಕಡ, ಗೋಳಿತ್ತೊಟ್ಟು ಪ್ರದೇಶಗಳಲ್ಲಿ ಕಾಡಾನೆ ಉಪಟಳ ದಿನೇ ದಿನೇ ಹೆಚ್ಚುತ್ತಿದ್ದು ತಮ್ಮ ಪ್ರಾಣರಕ್ಷಣೆಗಾಗಿ ಇಟ್ಟುಕೊಂಡಿರುವ ಕೋವಿಯು ಠಾಣೆಯ ಪಾಲಾಗಿರುವ ಬಗ್ಗೆ ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದು ಜಿಲ್ಲಾಧಿಕಾರಿಗೆ ಸಂಘಟನೆಗಳ ಮೂಲಕ ಹಾಗೂ ವೈಯಕ್ತಿಕವಾಗಿ ಮನವಿ ಸಲ್ಲಿಸಿದ್ದಾರೆ.

    ಚುನಾವಣಾ ಆಯೋಗ ಈ ಬಗ್ಗೆ ವಾಸ್ತವಿಕ ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕಾಗಿದ್ದು, ಕ್ರಿಮಿನಲ್ ಹಿನ್ನೆಲೆ ಇರುವವರ ಕೋವಿಗಳನ್ನು ವಶಕ್ಕೆ ಪಡೆಯುವುದು ನ್ಯಾಯಯುತ ಕ್ರಮ. ಆದರೆ ಕೃಷಿಕರೆಲ್ಲರನ್ನೂ ಕ್ರಿಮಿನಲ್ಸ್‌ಗಳಂತೆ ಕಂಡು ಅವಮಾನಿಸುವುದೂ ತರವಲ್ಲ ಎಂಬುದು ಕೃಷಿಕರ ವಾದ. ಜಿಲ್ಲಾಧಿಕಾರಿಗಳೂ ಚುನಾವಣಾ ಆಯೋಗದ ಆದೇಶ ಪಾಲನೆ ಮಾಡಬೇಕಿದೆ. ಆ ಆದೇಶವೇ ಅಂತಿಮವೆಂದಾದರೆ ಕೃಷಿಕರಾದ ನಾವೂ ಕಾನೂನಿಗೆ ಗೌರವ ಕೊಟ್ಟು ಆದೇಶ ಪಾಲನೆ ನಿಮಿತ್ತ ಕೋವಿ ಒಪ್ಪಿಸಲೇಬೇಕಾಗುತ್ತದೆ.ಆದರೆ ವನ್ಯಜೀವಿಗಳಿಂದ ನಮ್ಮ ಕೃಷಿ ನಾಶವಾದರೆ, ನಷ್ಟ ಭರಿಸಿಕೊಡುವ ಹೊಣೆ, ಯಾರದ್ದು ಎಂಬುದು ಕೃಷಿಕರ ಪ್ರಶ್ನೆ.

    ವಿಧಾನಸಭಾ ಚುನಾವಣೆ ಸಂದರ್ಭ ವಿನಾಯಿತಿ

    ಕಳೆದ ಚುನಾವಣಾ ಸಂದರ್ಭ ಠಾಣೆಯಲ್ಲಿ ಕೋವಿ ಇಡುವುದರಿಂದ ಯಾರಿಗೆ ವಿನಾಯಿತಿ ಕೊಡಬೇಕೆಂದು ನಿರ್ಧರಿಸುವ ಅಧಿಕಾರವನ್ನು ಸ್ಕ್ರೀನಿಂಗ್ ಕಮಿಟಿಗೆ ಕೊಟ್ಟಿತ್ತು. ಇದೀಗ ಲೋಕಸಭಾ ಚುನಾವಣೆ ಆಗಿರುವುದರಿಂದ ಈ ಸ್ಕ್ರೀನಿಂಗ್ ಕಮಿಟಿ ಜಿಲ್ಲಾ ಮಟ್ಟದ್ದಾಗಿರುತ್ತದೆ. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಅವಕಾಶ ಜಿಲ್ಲಾಧಿಕಾರಿಗಿರುತ್ತದೆ. ಯಾರೆಲ್ಲ ವಿನಾಯಿತಿ ಕೋರಿ ಅರ್ಜಿ ಸಲ್ಲಿಸುತ್ತಾರೋ, ಅವರಲ್ಲಿ ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಹೊರತುಪಡಿಸಿ ಉಳಿದೆಲ್ಲ ಕೃಷಿಕರಿಗೆ ವಿನಾಯಿತಿ ಕೊಡಿಸುವ ಅರ್ಥಪೂರ್ಣ ನಿರ್ಧಾರವನ್ನು ಜಿಲ್ಲಾಧಿಕಾರಿ ಕೈಗೊಳ್ಳಬೇಕಿದೆ.

    ನಿರಂತರ ಮಂಗ, ಹಂದಿಗಳ ಕಾಟ

    ದ.ಕ.ಜಿಲ್ಲೆಯಲ್ಲಿ ಅಡಕೆ, ತೆಂಗು ಮುಖ್ಯಬೆಳೆ. ಬಾಳೆ, ಗೇರುಗಳೂ ಇವೆ. ತರಕಾರಿಗಳೂ ಇವೆ. ಇವೆಲ್ಲದಕ್ಕೂ ಹಗಲು ಮಂಗಗಳ, ರಾತ್ರಿ ಹಂದಿಗಳ ಕಾಟ ನಿರಂತರವಿದೆ. ಇತ್ತೀಚೆಗಿನ ಆನೆ ಹಾವಳಿಯಿಂದ ಕೃಷಿಕರು ಬೆಳೆ ರಕ್ಷಣೆ ಚಿಂತೆ ಜತೆಗೆ ಜೀವಭಯದಲ್ಲಿ ನಿದ್ದೆಯಿಲ್ಲದೆ ಬದುಕುವಂತಾಗಿದೆ. ವಿಚಾರದ ಗಂಭೀರತೆ ಕನಿಷ್ಟ ದ.ಕ.ಜಿಲ್ಲೆಯಲ್ಲಾದರೂ ಸ್ಕ್ರೀನಿಂಗ್ ಕಮಿಟಿ ಅರ್ಥಮಾಡಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

    ಚುನಾವಣೆ ಸಂದರ್ಭ ಪರವಾನಗಿ ಹೊಂದಿದ ಕೋವಿಗಳನ್ನು ಠಾಣೆಯಲ್ಲಿ ಇಡಬೇಕೆಂಬ ಆದೇಶದಿಂದ ಕೃಷಿಕರು ಬಹಳ ನಷ್ಟ ಅನುಭವಿಸುತ್ತಾರೆ, ಕಿರಿಕಿರಿಗೆ ಒಳಗಾಗುತ್ತಾರೆ. ಕ್ರಿಮಿನಲ್ ಆರೋಪ ಇರುವವರನ್ನು ಹೊರತುಪಡಿಸಿ ಉಳಿದೆಲ್ಲಾ ಕೃಷಿಕರನ್ನು ಈ ಕೋವಿ ತಂದೊಪ್ಪಿಸುವ ಪ್ರಕ್ರಿಯೆಯಿಂದ ಹೊರಗಿಡಬೇಕೆಂಬುದು ನಮ್ಮ ಬೇಡಿಕೆ.
    -ಶ್ಯಾಮರಾಜ್ ಪಟ್ರಮೆ
    ಕೃಷಿಕರು. ಮಾಜಿ ಸದಸ್ಯರು, ಗ್ರಾಪಂ ಪಟ್ರಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts