More

    ನಂದಳಿಕೆ ನಾಲ್ಕು ಸ್ಥಾನದಲ್ಲಿ ಸಿರಿ ಜಾತ್ರೆ ಸಂಭ್ರಮ: ಚಾವಡಿ ಮನೆ ಆಡಳಿತದ ಬೆರ್ಮೆರ್ ಏಳ್ವೆರ್ ಸಿರಿಗಳ ಮಹತ್ವದ ಮೂಲಸ್ಥಾನ

    ಹರಿಪ್ರಸಾದ್ ನಂದಳಿಕೆ ಕಾರ್ಕಳ
    ತ್ರಿಕಾಲಾರ್ಚನೆ ಇರುವ ಇತಿಹಾಸ ಪ್ರಸಿದ್ಧ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದ ಅಯನೋತ್ಸವ ಸಿರಿಜಾತ್ರೆಯು ಪ್ರತಿ ವರ್ಷ ಮೀನ ಮಾಸದ(ಸುಗ್ಗಿ) ತಿಂಗಳ ಪೌರ್ಣಮಿಯಂದು ಸಂಪನ್ನಗೊಳ್ಳುತ್ತಿದ್ದು ಈ ಬಾರಿ ಮಾ.25ರಂದು ಜರುಗಲಿದೆ.

    ಅವಿಭಜಿತ ದ.ಕ ಜಿಲ್ಲೆ, ಕಾಸರಗೋಡು ಸೇರಿದಂತೆ ನಾನಾ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರ ದಂಡು ನಂದಳಿಕೆಯ ಸಿರಿ ಜಾತ್ರೆಯ ವೈಭವ ಕಣ್ತುಂಬಿಕೊಳ್ಳಲು ಪ್ರತಿ ವರ್ಷವೂ ಆಗಮಿಸುತ್ತಾರೆ. ಶ್ರೀಮಹಾಲಿಂಗೇಶ್ವರ ಸ್ವಾಮಿ ಸಹಿತ ಪರಿವಾರ, ಶ್ರೀಬೆರ್ಮೆರ್, ಸಿರಿ-ಕುಮಾರರ ದರ್ಶನ ಕಂಡು ಪುನೀತರಾಗುತ್ತಾರೆ.

    ಪ್ರತಿ ವರ್ಷವೂ ವಿಜೃಂಭಣೆಯಿಂದ ಜರುಗುವ ಸಿರಿ ಜಾತ್ರೆಯ ಅಚ್ಚುಕಟ್ಟಿನ ವ್ಯವಸ್ಥೆ ನಾಡಿನಲ್ಲೇ ಪ್ರಸಿದ್ಧಿ ಪಡೆದುಕೊಂಡಿದೆ. ದೇವಾಲಯದಲ್ಲಿ ಪ್ರಧಾನವಾಗಿರುವ ಶ್ರೀ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ಹೂವಿನ ಪೂಜೆ, ಬಿಲ್ವಪತ್ರಾರ್ಚನೆ, ತುಲಾಭಾರ ಸೇವೆ, ನಂದೀಶ್ವರನಿಗೆ ಹುರುಳಿ ತೆಂಗಿನಕಾಯಿ ಅರ್ಪಣೆ, ಕುಮಾರ ಅಬ್ಬಗ-ದಾರಗರಿಗೆ ಪಟ್ಟೆ ಸೀರೆ ಒಪ್ಪಿಸುವುದು, ಶಿವ ಸಾನ್ನಿಧ್ಯಕ್ಕೆ ಬೆಳ್ಳಿ ತೊಟ್ಟಿಲು-ಮಗು, ನರ, ಸಿಬ್ಬ, ಆಣಿ ಮುಂತಾದವುಗಳನ್ನು ಅರ್ಪಿಸುವುದು ಇಲ್ಲಿನ ಪ್ರಮುಖ ಹರಕೆಗಳಾಗಿವೆ.

    ನಾಗಾರಾಧನೆಗೆ ಮಹತ್ವ

    ನಂದಳಿಕೆ ಆಯನೋತ್ಸವದಲ್ಲಿ ಈಶ್ವರ ಪ್ರಧಾನ ಮೂರ್ತಿಯಾದರೂ ಸಿರಿಜಾತ್ರೆ ಮತ್ತು ನಾಗಾರಾಧನೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ನಾಗ ಸಂಬಂಧಿಯಾದ ಆದಿ ಮತ್ತು ಪಂಚದೈವಿಕ ನೆಲೆಯ ಸಿರಿ ಸಂಬಂಧಿಯಾದ ಆಲಡೆ ಎಂಬ ಅನಾದಿ ನಂಟು ಹೊಂದಿರುವ ಅಸಂಖ್ಯ ಆಸ್ತಿಕರು ಇಲ್ಲಿನ ನಾಗ ಸನ್ನಿಧಿಯಲ್ಲಿ ತನು-ತಂಬಿಲ ಸೇವೆ ಅರ್ಪಿಸಿ, ಹರಕೆ ಸಮರ್ಪಿಸಿ ಸಂತೃಪ್ತರಾಗುತ್ತಾರೆ.

    ನಂದಳಿಕೆ ಕೆದಿಂಜೆ ಗ್ರಾಮಗಳಿಗೆ ಒಂದೇ ಆಲಯವಾಗಿರುವ ಈ ದೇವಳದ ಆಡಳಿತ ಪಾರಂಪರ್ಯವಾಗಿ ಚಾವಡಿ ಅರಮನೆಯದ್ದು. ಸದ್ಯ 1970ರಿಂದ ಹಿರಿಯರಾದ ಸುಂದರರಾಮ ಹೆಗ್ಡೆ ಅವರು ಆನುವಂಶಿಕ ಧರ್ಮದರ್ಶಿಗಳಾಗಿದ್ದು, ಅಯನೋತ್ಸವ ಆಚರಣೆ ಮತ್ತು ಸುಧಾರಣೆಯ ಶೃಂಗಶ್ರೇಣಿಯಲ್ಲಿದ್ದು, ಪ್ರಸ್ತುತ ಹೆಗ್ಡೆ ಅವರ ಪುತ್ರ ಸುಹಾಸ್ ಹೆಗ್ಡೆ ನೇತೃತ್ವದೊಂದಿಗೆ, ಸ್ಥಳೀಯ ತಂಡಗಳು ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳು, ಭಕ್ತರು ಈ ಆಯನೋತ್ಸವದ ಅಭೂತಪೂರ್ವ ಯಶಸ್ಸಿಗೆ ಸಮರ್ಪಣಾ ಮನೋಭಾವದಿಂದ ಶ್ರಮಿಸುತ್ತವೆ. ಪ್ರತಿ ವರ್ಷವೂ ಊರ ಪರ-ಊರಿನ 1500ಕ್ಕೂ ಅಧಿಕ ಸ್ವಯಂ ಸೇವಕರು ಹಗಲಿರುಳು ಸೇವೆ ಸಲ್ಲಿಸುತ್ತಾರೆ.

    ಸೋದೆ ವಾದಿರಾಜ ತೀರ್ಥರಿಂದ ಸ್ಥಾಪನೆ

    ನಂದಳಿಕೆ ಚಾವಡಿ ಅರಮನೆಯ ಪಟ್ಟಾಭಿಷಿಕ್ತ ಹೂವಯ್ಯ ಪೆರ್ಗಡೆ ಅವರಿಂದ ನಿರ್ಮಾಣಗೊಂಡು, ಸೋದೆ ವಾದಿರಾಜತೀರ್ಥ ಯತಿವರೇಣ್ಯರಿಂದ ಪ್ರತಿಷ್ಠಾಪನೆಗೊಂಡ ಈ ದೇವಾಲಯ ಅತ್ಯಂತ ಕಾರಣಿಕದ ಕ್ಷೇತ್ರ, ಸುಪ್ರಸಿದ್ಧ ಶೈವಾಲಯವಾಗಿ ಗುರುತಿಸಿಕೊಂಡಿದೆ. ತುಳು ಜಾನಪದರ ಆರಾಧ್ಯ ಸತ್ಯದ ನಾರಿ ಸಿರಿ ಕಥಾನಕದ ಅಂತಿಮ ಭಾಗ ಇಲ್ಲಿನ ನೆರೆಯ ಉರ್ಕಿದೊಟ್ಟು ಎಂಬಲ್ಲಿ ಸಂಭವಿಸಿದ್ದು, ಸಿರಿಪುತ್ರಿ ಸೊನ್ನೆಯ ಅವಳಿ ಕುವರಿಯರಾದ ಅಬ್ಬಗ-ದಾರಗರು ದೈವತ್ವಕ್ಕೇರಿದ್ದಾರೆ. ಬಳಿಕ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನ ನಿರ್ಮಾಣ ಸಂಕಲ್ಪಕ್ಕೆ ಹೂವಯ್ಯ ಪೆರ್ಗಡೆಗೆ ಪ್ರೇರಕರಾಗುತ್ತಾ ಈ ಶೈವಾಲಯದ ಶಿವ ಸಾನ್ನಿಧ್ಯದಲ್ಲೇ ನೆಲೆಗೊಳ್ಳುತ್ತಾರೆ.

    ನಂದಳಿಕೆ ನಾಲ್ಕು ಸ್ಥಾನದಲ್ಲಿ ಸಿರಿ ಜಾತ್ರೆ ಸಂಭ್ರಮ: ಚಾವಡಿ ಮನೆ ಆಡಳಿತದ ಬೆರ್ಮೆರ್ ಏಳ್ವೆರ್ ಸಿರಿಗಳ ಮಹತ್ವದ ಮೂಲಸ್ಥಾನ

    ಸಿರಿ ಕ್ಷೇತ್ರಗಳಿಗೆ ಮೂಲ

    ಇಲ್ಲಿಂದ ಸಪ್ತಸಿರಿಗಳಾರಾಧನೆ ಸಾಕಾರಗೊಳ್ಳುವುದರೊಂದಿಗೆ ನಂದಳಿಕೆ ಇತರ ಎಲ್ಲ್ಲ ಸಿರಿ ಕ್ಷೇತ್ರಗಳಿಗೆ ಮೂಲ ಸಿರಿಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಜತೆಗೆ ಆಯನೋತ್ಸವ ಸಂದರ್ಭ ರಾತ್ರಿ ಧ್ವಜಾರೋಹಣ ನಡೆಯುವ ಏಕೈಕ ದೇಗುಲ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

    ಸರ್ವ ಧರ್ಮೀಯರ ಸೇವೆ

    ಇದು ಹಿಂದು ದೇವಾಲಯದ ಜಾತ್ರೆಯಾದರೂ ನಂದಳಿಕೆ ಗ್ರಾಮದಲ್ಲಿ ಸರ್ವ ಧರ್ಮೀಯರೂ ಜತೆಯಾಗಿ ಸೇವೆ ಸಲ್ಲಿಸುತ್ತಾರೆ. ಉತ್ಸವದ ಬಲಿ ಸಂದರ್ಭ ದೇವರ ನಂದಿ ಹಿಡಿಯುವ ಕಾಯಕವನ್ನು ಕಳೆದ ಹಲವು ವರ್ಷಗಳಿಂದ ಕ್ರೈಸ್ತ ಸಮುದಾಯದ ವಿಕ್ಟರ್ ನೊರೊನ್ಹ ನಿರ್ವಹಿಸುತ್ತಿದ್ದಾರೆ. ಜತೆಗೆ ಕೌಂಟರ್ ಹಾಗೂ ಇತರ ಕೆಲಸದಲ್ಲಿಯೂ ನೂರಾರು ಕ್ರೈಸ್ತ ಸಮುದಾಯದ ಮಂದಿ ಭಾಗಿಯಾಗಿ ಸೇವೆ ಸಲ್ಲಿಸುವ ಮೂಲಕ ಸೌಹಾರ್ದಕ್ಕೆ ಸಾಕ್ಷಿಯಾಗಿದ

    ಪ್ರಚಾರದಲ್ಲಿ ವಿಶೇಷ ಮಾದರಿ

    ಸಿರಿಜಾತ್ರೆಯ ಪ್ರಚಾರದ ಫಲಕಗಳು ಪ್ರತಿ ಬಾರಿಯೂ ವಿಭಿನ್ನವಾಗಿ ಆಕರ್ಷಣೀಯವಾಗಿರುತ್ತದೆ. ಈ ಪ್ರಚಾರದ ಫಲಕಗಳೇ ಭಕ್ತರನ್ನು ಹೆಚ್ಚು ಆಕರ್ಷಿಸುತ್ತದೆ. ಈ ಹಿಂದೆ ಮೈಲಿಗಲ್ಲು, ಅಂಚೆ ಚೀಟಿ, ಮಾವಿನ ಎಳೆ ಮಾದರಿ, ಗೋಣಿಚೀಲ, ಕೊಡೆ ಮಾದರಿ, ಹಕ್ಕಿಗಳಿಗೆ ನೀರು ಉಣಿಸುವ ಮಣ್ಣಿನ ಮಡಕೆ, ಹೀಗೆ ಪ್ರತಿ ವರ್ಷವೂ ಭಿನ್ನ ಮಾದರಿಯಲ್ಲಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts