More

    ಕಿಂಡಿ ಅಣೆಕಟ್ಟು ಈಗಲೇ ಬರಿದು

    -ಮನೋಹರ ಬಳಂಜ ಬೆಳ್ತಂಗಡಿ

    ದಿಡುಪೆ ಕಡೆಯಿಂದ ಹರಿಯುವ ನೇತ್ರಾವತಿ ನದಿ ಬಿರುಬಿಸಿಲಿಗೆ ಬತ್ತಿದ್ದು, ಕಿಂಡಿ ಅಣೆಕಟ್ಟುಗಳು ಬರಿದಾಗಿವೆ. ಮಾರ್ಚ್ ಅಂತ್ಯದೊಳಗೆ ಮಳೆ ಸುರಿಯದಿದ್ದರೆ ನೀರಿನ ತೀವ್ರ ಅಭಾವ ಸೃಷ್ಟಿಯಾಗುವ ಭೀತಿಯನ್ನು ಕೃಷಿಕರು ಎದುರಿಸುತ್ತಿದ್ದಾರೆ.

    ಫೆಬ್ರವರಿ ಅಂತ್ಯಕ್ಕೇ ನದಿಯ ಹರಿವು ನಿಂತಿದ್ದು, ಪ್ರಸ್ತುತ ನದಿ ಪ್ರದೇಶದ ಹೊಂಡಗಳಲ್ಲಿ ಮಾತ್ರ ನೀರು ಇದೆ. ಕಿಂಡಿ ಅಣೆಕಟ್ಟುಗಳ ನೀರು ಖಾಲಿಯಾಗುತ್ತಿದ್ದಂತೆ ಪರಿಸರದ ಕೆರೆ, ಬಾವಿಗಳ ನೀರಿನ ಮಟ್ಟವೂ ಇಳಿಕೆಯಾಗಿದೆ. ದಿಡುಪೆಯಿಂದ ಕಲ್ಮಂಜ ಗ್ರಾಮ ಪಜಿರಡ್ಕ ತನಕ ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ಹರಿಯುವ ನೇತ್ರಾವತಿ ನದಿಯ ನೀರು ಸಾವಿರಾರು ಕೃಷಿ ಕುಟುಂಬಗಳಿಗೆ ಆಧಾರವಾಗಿದೆ. ನೇತ್ರಾವತಿ ನದಿಗೆ ಇರುವ ಹಲವು ಸಾಂಪ್ರದಾಯಿಕ ಕಟ್ಟ, ಕಿಂಡಿ ಅಣೆಕಟ್ಟುಗಳು, ಸಂಪರ್ಕ ಹಳ್ಳಗಳು ಈಗಾಗಲೇ ಬರಿದಾಗಿವೆ.

    ಪಜಿರಡ್ಕ ಬಳಿ ನೇತ್ರಾವತಿ ನದಿಗೆ ಮೃತ್ಯುಂಜಯ ನದಿ ಸಂಗಮಗೊಳ್ಳುತ್ತದೆ. ಮೃತ್ಯುಂಜಯ ನದಿಯಲ್ಲಿ ಈಗ ಸಾಮಾನ್ಯ ಹರಿವಿದೆ. ಈ ಕಾರಣದಿಂದ ಇಲ್ಲಿನ ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಇಲ್ಲ. ಪ್ರಸ್ತುತ ಪಂಪುಗಳ ಮೂಲಕ ಕೃಷಿಕರು ಗಂಟೆಗಳ ಲೆಕ್ಕದಲ್ಲಿ ಕೆರೆ ಬಾವಿಗಳಿಂದ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಹಲವು ಪಂಚಾಯಿತಿ ವ್ಯಾಪ್ತಿಗಳಲ್ಲಿ ಲೋವೋಲ್ಟೇಜ್ ಕಾರಣದಿಂದ ಪಂಪ್‌ಗಳನ್ನು ಚಾಲು ಮಾಡಲಾಗುತ್ತಿಲ್ಲ.

    ಪ್ರಮುಖ ನದಿ ನೀರಿನ ಮಟ್ಟವೂ ಇಳಿಕೆ

    ಬೆಳ್ತಂಗಡಿ ತಾಲೂಕಿಗೆ ಆಧಾರವಾಗಿರುವ ನೇತ್ರಾವತಿ, ಕಪಿಲಾ, ಸೋಮಾವತಿ, ಫಲ್ಗುಣಿ ನದಿಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ತೀವ್ರ ಇಳಿಕೆಯಾಗುತ್ತಿರುವುದರಿಂದ ಸಮಸ್ಯೆ ತಲೆದೋರಲಿದೆ. ಕಳೆದ ವರ್ಷ ಬೇಸಿಗೆ ಮಳೆ ತೀರಾ ಕಡಿಮೆ ಪ್ರಮಾಣದಲ್ಲಿ ಸುರಿದಿದ್ದರಿಂದ ತಾಲೂಕಿನ ಎಲ್ಲ ನದಿಗಳೂ ಬತ್ತಿದ್ದು, ಕೃಷಿಗೆ ಭಾರಿ ಸಮಸ್ಯೆ ತಂದೊಡ್ಡಿತ್ತು. ತಡವಾಗಿ ಮಳೆ ಸುರಿದಿದ್ದರಿಂದ ನದಿಗಳಲ್ಲಿ ನೀರಿನ ಹರಿವು ತಡವಾಗಿ ಆರಂಭವಾಗಿತ್ತು.

    Vented dam 2

    ಬಳಕೆಗೆ ಇರಲಿ ಮಿತಿ

    ಕೆಲವು ಕಡೆಗಳಲ್ಲಿ ಕೆರೆ, ಬಾವಿಗಳಲ್ಲಿ ಸಾಮಾನ್ಯ ಮಟ್ಟದ ನೀರಿದ್ದು, ಅದನ್ನು ಮಿತವಾಗಿ ಬಳಸಬೇಕಾದ ಅಗತ್ಯವಿದೆ. ನೇತ್ರಾವತಿ ನದಿಯ ಜಲಮೂಲಗಳಾದ ಎರ್ಮಾಯಿ, ಎಳನೀರು ಕಡಮಗುಂಡಿ, ಬಂಗಾರಪಲ್ಕೆ ಮೊದಲಾದ ಜಲಪಾತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ತೀವ್ರ ಕ್ಷೀಣಿಸಿದೆ. ಜತೆಗೆ ಅಕ್ರಮ ಮರಳುಗಾರಿಕೆ ನಡೆಸುವವರ ಮೇಲೆ ನಿಗಾ ಇರಿಸಬೇಕಿದೆ.

    ತೋಟಕ್ಕೆ ಗಂಟೆಗಳ ಲೆಕ್ಕದಲ್ಲಿ ಕೆರೆಯಿಂದ ನೀರು ಹರಿಸಲಾಗುತ್ತಿದೆ. ಮುಂದಿನ 10 ದಿನಗಳವರೆಗೆ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳಲಾರದು. ಮಾರ್ಚ್‌ನಲ್ಲಿ ಮಳೆ ಸುರಿಯದಿದ್ದರೆ ಕೃಷಿಯ ಜತೆ ದೈನಂದಿನ ಉಪಯೋಗದ ನೀರಿಗೂ ಸಮಸ್ಯೆ ಎದುರಾಗುವುದು ಖಚಿತ.
    -ಸೂರ್ಯಕಾಂತ ಹೆಬ್ಬಾರ್, ಕೃಷಿಕ, ಲಾಯಿಲ

    ಪ್ರತಿ ಪಂಚಾಯಿತಿಗಳು ತಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಅಧ್ಯಯನ ನಡೆಸಿ, ಗ್ರಾಮಸ್ಥರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
    -ವೈಜಣ್ಣ, ಇ.ಒ, ತಾಲೂಕು ಪಂಚಾಯಿತಿ, ಬೆಳ್ತಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts