More

    ಪೈಪ್ ಕಾಮಗಾರಿಗೆ ರಸ್ತೆ ಅಗೆತ

    -ಪುರುಷೋತ್ತಮ ಪೆರ್ಲ ಕಾಸರಗೋಡು

    ಕುಡಿಯುವ ನೀರು, ದೂರವಾಣಿ ಸಹಿತ ವಿವಿಧ ಕಾಮಗಾರಿಗಳಿಗೆ ರಸ್ತೆಗಳನ್ನು ಅಗೆಯುತ್ತಿರುವುದರಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿರುವ ರಾಜ್ಯ ಲೋಕೋಪಯೋಗಿ ಇಲಾಖೆ ರಸ್ತೆ ಶಿಥಿಲಾವಸ್ಥೆ ತಲುಪುತ್ತಿದೆ. ಜಿಲ್ಲೆಯ ಹಲವೆಡೆ ಹೊಂಡ ಅಗೆದು ಪೈಪ್ ಅಳವಡಿಕೆಯಾಗುತ್ತಿದ್ದು, ಈ ವೇಳೆ ನಿರ್ದಿಷ್ಟ ಮಾನದಂಡ ಪಾಲನೆಯಾಗುತ್ತಿಲ್ಲ. ಅಲ್ಲದೆ ವಾಹನ, ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

    ಕಾಸರಗೋಡು, ವಿದ್ಯಾನಗರ, ಉಳಿಯತ್ತಡ್ಕ, ಎಚ್‌ಎಎಲ್ ಹಾದಿಯಾಗಿ ಸೀತಾಂಗೋಳಿಗೆ ತೆರಳುವ ರಸ್ತೆಯನ್ನು ವರ್ಷಗಳ ಹಿಂದೆಯಷ್ಟೇ ಲಕ್ಷಾಂತರ ರೂ. ವೆಚ್ಚದಲ್ಲಿ ರೋಡ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಕೇರಳ ಲಿಮಿಟೆಡ್(ಆರ್‌ಐಸಿಕೆ-ರಿಕ್)ವತಿಯಿಂದ ಅಭಿವೃದ್ಧಿಪಡಿಸಲಾಗಿದ್ದು, ಪ್ರಸ್ತುತ ರಸ್ತೆ ಅಂಚಿನಲ್ಲಿ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಬೃಹತ್ ಹೊಂಡಗಳನ್ನು ತೆಗೆಯಲಾಗುತ್ತಿದೆ.

    ಒಂದು ಕಿ.ಮೀ ರಸ್ತೆ ಡಾಂಬರು ಕಾಮಗಾರಿಗೆ 1ರಿಂದ 3 ಕೋಟಿ ರೂ. ಹಣ ವ್ಯಯಿಸಿ ರಸ್ತೆ ಅಭಿವೃದ್ಧಿಗೊಳಿಸಲಾಗಿತ್ತು. ಕಾಮಗಾರಿ ನಡೆದ ವರ್ಷದೊಳಗೆ ದೂರವಾಣಿ, ಕುಡಿಯುವ ನೀರು ಸಹಿತ ವಿವಿಧ ಅಗತ್ಯಗಳಿಗೆ ರಸ್ತೆ ಬದಿ ಅಗೆತ ಆರಂಭಿಸಲಾಗಿದೆ. ರಸ್ತೆ ಅಗೆದರೂ ಮುಚ್ಚುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳೂ ನಿರ್ಲಕ್ಷೃ ವಹಿಸಿದ್ದು, ಜನರ ತೆರಿಗೆ ಹಣ ಪೋಲಾಗುತ್ತಿದೆ.

    ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸುವ ಸಂದರ್ಭವೇ ರಸ್ತೆ ಅಂಚಿಗೆ ಪ್ರತ್ಯೇಕ ಕಾಲುವೆ ನಿರ್ಮಿಸಿ ಅದರಲ್ಲಿ ಕುಡಿಯುವ ನೀರಿನ ಪೈಪ್, ದೂರವಾಣಿ, ವಿದ್ಯುತ್ ಕೇಬಲ್‌ಗಳನ್ನು ಅಳವಡಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಿದರೆ ಪ್ರತಿ ಬಾರಿ ರಸ್ತೆ ಅಗೆತ ತಡೆಗಟ್ಟಬಹುದು. ಇದರಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸುವ ರಸ್ತೆಗಳು ಕೆಲವೇ ವರ್ಷದಲ್ಲಿ ಶಿಥಿಲಗೊಳ್ಳುವುದನ್ನು ತಪ್ಪಿಸಬಹುದು ಎಂಬುದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

    ಅಂದಿನ ಸಚಿವರಿಂದ ಭರವಸೆ

    ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿದ್ಯಾನಗರದಲ್ಲಿ ಚಾಲನೆ ನೀಡಿದ್ದ ಅಂದಿನ ಲೋಕೋಪಯೋಗಿ ಖಾತೆ ಸಚಿವ ಜಿ.ಸುಧಾಕರನ್ ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಲೋಕೋಪಯೋಗಿ ಇಲಾಖೆಯ ರಸ್ತೆ ಬದಿ ಯಾವುದೇ ನಿರ್ಮಾಣ ಕಾರ್ಯ, ಅಗೆತಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದೂ ಅಲ್ಲದೇ ತಮ್ಮ ವಚನಕ್ಕೆ ಬದ್ಧರಾಗಿದ್ದರು. ಈಗ ಲೋಕೋಪಯೋಗಿ ಇಲಾಖೆಗೆ ಕ್ಯಾರ್ ಎನ್ನದೆ ರಸ್ತೆಬದಿ ಅಗೆತ ಕಾಮಗಾರಿ ನಡೆಯುತ್ತಿದೆ.

    ಲೋಕೋಪಯೋಗಿ, ಸಂಪರ್ಕ, ಜಲಪ್ರಾಧಿಕಾರ ಸಹಿತ ವಿವಿಧ ಇಲಾಖೆಗಳ ನಡುವಿನ ಒಪ್ಪಂದದ ಪ್ರಕಾರ ಇಂತಹ ಕಾಮಗಾರಿ ನಡೆಯುತ್ತಿದೆ. ಕಾಸರಗೋಡು, ವಿದ್ಯಾನಗರ, ಸೀತಾಂಗೋಳಿ ರಸ್ತೆ ಅಂಚಿಗೆ ಜಲಜೀವನ್ ಮಿಷನ್ ವತಿಯಿಂದ ನೀರು ಪೂರೈಕೆಗಾಗಿ ಪೈಪ್ ಅಳವಡಿಸಲಾಗುತ್ತಿದೆ. ಹೊಂಡ ಮುಚ್ಚಿ ರಸ್ತೆ ಅಂಚಿಗೆ ಕಾಂಕ್ರೀಟ್ ಅಳವಡಿಸಿ ರಸ್ತೆ ಸುಸ್ಥಿತಿಗೆ ತರುವ ಬಗ್ಗೆ ಜಲಜೀವನ್ ಮಿಷನ್ ಕ್ರಮ ಕೈಗೊಳ್ಳಲಿದೆ.
    -ಅನೂಪ್ ಪಿ., ಸಹಾಯಕ ಅಭಿಯಂತ
    ರೋಡ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಕೇರಳ(ಆರ್‌ಐಸಿಕೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts