

Rahul Gandhi : ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಮತ್ತೊಮ್ಮೆ ಮತಗಳ್ಳತನ ಆರೋಪ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಾಬಲ್ಯವಿರುವ ಕಡೆ ಸಾಕಷ್ಟು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕ ರಾಜ್ಯದ ಹೊರಗಿನಿಂದ ನಕಲಿ ಲಾಗಿನ್‌ಗಳು ಮತ್ತು ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಮತದಾರರ ಗುರುತಿನ ಚೀಟಿಗಳನ್ನು ಅಳಿಸಲಾಗಿದೆ. ಈ ಕೃತ್ಯ ವ್ಯಕ್ತಿಗಳಿಂದ ನಡೆದಿಲ್ಲ, ಬದಲಾಗಿ ಸಾಫ್ಟ್‌ವೇರ್ ಬಳಸಿ, ಕೇಂದ್ರೀಕೃತ ರೀತಿಯಲ್ಲಿ ಮಾಡಲಾಗಿದೆ ಎಂದಿದ್ದಾರೆ.
ಒಂದು ಚುನಾವಣೆಯ ನಂತರ ಒಂದು ಚುನಾವಣೆ ನಡೆಯುತ್ತಿದ್ದಂತೆ, ಭಾರತದಾದ್ಯಂತ ಲಕ್ಷಾಂತರ ಮತದಾರರನ್ನು, ವಿವಿಧ ಸಮುದಾಯಗಳನ್ನು, ಮುಖ್ಯವಾಗಿ ವಿಪಕ್ಷಕ್ಕೆ ಮತ ಹಾಕುತ್ತಿರುವ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಒಂದು ಗುಂಪಿನ ಜನರು ವ್ಯವಸ್ಥಿತವಾಗಿ ಮತದಾರರ ಹೆಸರನ್ನು ಡಿಲೀಟ್ ಮಾಡುತ್ತಿದ್ದಾರೆ. ಇದಕ್ಕೆ ನಾವು 100 ಪ್ರತಿಶತ ಪುರಾವೆಗಳನ್ನು ಕಂಡುಕೊಂಡಿದ್ದೇವೆ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ, ಸಂವಿಧಾನವನ್ನು ಪ್ರೀತಿಸುತ್ತೇನೆ, ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರೀತಿಸುತ್ತೇನೆ ಮತ್ತು ನಾನು ಆ ಪ್ರಕ್ರಿಯೆಯನ್ನು ರಕ್ಷಿಸುತ್ತಿದ್ದೇನೆ. ನೀವು ನಿರ್ಧರಿಸಬಹುದಾದ ಶೇ. 100 ರಷ್ಟು ಪುರಾವೆಗಳನ್ನು ಆಧರಿಸಿರದ ಯಾವುದನ್ನೂ ನಾನು ಇಲ್ಲಿ ಹೇಳುವುದಿಲ್ಲ. ತೀರ್ಪು ನಿಮ್ಮದಾಗಿದೆ ಎಂದು ಗಾಂಧಿ ಹೇಳಿದ್ದಾರೆ.
ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಯಾರೋ ಒಬ್ಬರು 6,018 ಮತಗಳನ್ನು ಅಳಿಸಲು ಪ್ರಯತ್ನಿಸಿದರು ಆದರೆ, ಕಾಕತಾಳೀಯದಿಂದಾಗಿ ಸಿಕ್ಕಿಬಿದ್ದರು. ಬೂತ್ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಸ್ವಂತ ಚಿಕ್ಕಪ್ಪನ ಮತವನ್ನು ಸಹ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕಂಡುಕೊಂಡಾಗ ಈ ವಂಚನೆ ಆಕಸ್ಮಿಕವಾಗಿ ಬಹಿರಂಗವಾಯಿತು ಎಂದು ರಾಹುಲ್ ಹೇಳಿದ್ದಾರೆ. ಅಲ್ಲದೆ, ಆಳಂದದಲ್ಲಿ ಮತದಾರರಂತೆ ನಟಿಸಿ 6,018 ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಅರ್ಜಿಗಳನ್ನು ಸಲ್ಲಿಸಿದ ಜನರು ವಾಸ್ತವವಾಗಿ ಅಂದರೆ ನಿಜವಾಗಿ ಸಲ್ಲಿದೇ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಂದಹಾಗೆ ಆಳಂದ ವಿಧಾನಸಭಾ ಕ್ಷೇತ್ರವು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಆದರೆ, ಇದು ಕಲಬುರಗಿ ಜಿಲ್ಲೆಯ ಒಂದು ತಾಲೂಕು. 2023ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಸುಮಾರು 2.29 ಲಕ್ಷಗಳಿದ್ದು, ಶೇ.73.48% ರಷ್ಟು ಮತದಾನವಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಬಿ.ಆರ್. ಪಾಟೀಲ್ ಮತ್ತು ಬಿಜೆಪಿಯಿಂದ ಸುಭಾಷ್ ಗುತ್ತೇದಾರ್ ಸ್ಪರ್ಧಿಸಿದರು. ಬಿ.ಆರ್. ಪಾಟೀಲ್ ಅವರು 89,508 ಮತಗಳನ್ನು ಗಳಿಸಿದರೆ, ಗುತ್ತೇದಾರ್ ಅವರು 79,160 ಮತಗಳನ್ನು ಗಳಿಸಿದರು. ಬಿ.ಆರ್. ಪಾಟೀಲ್ ಅವರು 10, 348 ಮತಗಳ ಅಂತರದೊಂದಿಗೆ ಗೆದ್ದರು. ಇದು 2018ರಲ್ಲಿ ಬಿಜೆಪಿ ಗೆಲುವಿನ ಬಳಿಕ ಕಂಡ ದೊಡ್ಡ ಬದಲಾವಣೆಯಾಗಿತ್ತು. ಅಂದು ಗುತ್ತೇದಾರ್ ಕೇವಲ 657 ಮತಗಳ ಅಂತರದೊಂದಿಗೆ ಗೆದ್ದಿದ್ದರು. ಇತರ ಅಭ್ಯರ್ಥಿಗಳು ಸಾಮಾನ್ಯ ಮತಗಳನ್ನು ಗಳಿಸಿದರೂ, ಇಬ್ಬರು ಪ್ರಮುಖ ಪಕ್ಷಗಳ ನಡುವಿನ ಸ್ಪರ್ಧೆಯೇ ನಿರ್ಧಾರಾತ್ಮಕವಾಗಿತ್ತು. ಇನ್ನು 20213ರಲ್ಲಿ ಈ ಫಲಿತಾಂಶ ಕಾಂಗ್ರೆಸ್ಗೆ ರಾಜ್ಯದಲ್ಲಿ ಅಧಿಕಾರಕ್ಕೇರುವಲ್ಲಿ ಸಹಾಯ ಮಾಡಿತು ಮತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರೂಪಿಸಲು ನೆರವಾಯಿತು. ಅಲ್ಲದೆ, ಆಳಂದದ ಗೆಲುವು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ INCಯ ಬಲವನ್ನು ತೋರಿಸಿತು.
ಇನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಕರ್ನಾಟಕ ಸಿಐಡಿ 18 ತಿಂಗಳಲ್ಲಿ ಚುನಾವಣಾ ಸಂಸ್ಥೆಗೆ 18 ಪತ್ರಗಳನ್ನು ಕಳುಹಿಸಿದೆ ಮತ್ತು ಮಾಹಿತಿ ಕೋರಿದೆ ಎಂದರು. ಮತದಾರರ ಡಿಲೀಷನ್ ಫಾರ್ಮ್‌ಗಳನ್ನು ಭರ್ತಿ ಮಾಡಿದ ಸಾಧನದ ಐಪಿ ಅಡ್ರೆಸ್ ಮತ್ತು ಒಟಿಪಿ ಟ್ರೇಲ್‌ಗಳಂತಹ ಮಾಹಿತಿಯನ್ನು ಸಿಐಡಿ ಕೋರಿದೆ. ಆದರೆ, ಚುನಾವಣಾ ಆಯೋಗ ಅದನ್ನು ನೀಡುತ್ತಿಲ್ಲ ಏಕೆಂದರೆ, ಮತದಾರರ ಹೆಸರನ್ನು ಡಿಲೀಟ್ ಮಾಡುವ ಕಾರ್ಯಾಚರಣೆ ನಡೆಯುತ್ತಿರುವ ಕಡೆ ನಮ್ಮನ್ನು ಐಪಿ ಅಡ್ರೆಸ್ ಕರೆದೊಯ್ಯುತ್ತದೆ. ಆದರೆ, ಜ್ಞಾನೇಶ್ ಕುಮಾರ್ ಅವರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲಾಗುತ್ತಿದೆ ಮತ್ತು ದೊಡ್ಡ ಸಂಪನ್ಮೂಲಗಳನ್ನು ಬಳಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇನ್ನು ಚುನಾವಣಾ ಆಯೋಗ ರಾಹುಲ್ ಗಾಂಧಿಯ ಆರೋಪಗಳನ್ನು 'ಆಧಾರರಹಿತ ಮತ್ತು ತಪ್ಪು' ಎಂದು ತಿರಸ್ಕರಿಸಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದಿದೆ.
ಅಂದಹಾಗೆ, ಈ ಆರೋಪಗಳು ರಾಹುಲ್ ಗಾಂಧಿಯ 'ಮತದಾರ ಹಕ್ಕು ಯಾತ್ರೆ'ಯಿಂದ ಆರಂಭವಾಗಿವೆ. ಬಿಹಾರದಲ್ಲಿ 65 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಈ ಹಿಂದೆ ಆರೋಪಿಸಿದ್ದರು. ಬಳಿಕ ಬೆಂಗಳೂರು ಸೆಂಟ್ರಲ್‌ನ ಮಹದೇವಪುರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ಹೇಳಿದ್ದರು. ಇದೀಗ ಆಳಂದ ಕ್ಷೇತ್ರದಲ್ಲಿ 6 ಸಾವಿರ ಮತಗಳನ್ನು ಅಳಿಸುವ ಪ್ರಯತ್ನ ನಡೆದಿದೆ ಎಂದಿದ್ದಾರೆ. ಇದೀಗ ಮತ್ತೊಮ್ಮೆ ಮತಗಳ್ಳತನ ಆರೋಪದ ಚರ್ಚೆ ಮುನ್ನಲೆಗೆ ಬಂದಿದೆ. (ಏಜೆನ್ಸೀಸ್)