ಅಧಿಕ ಉಷ್ಣಾಂಶಕ್ಕೆ ಉತ್ತರ ಪ್ರದೇಶ ತತ್ತರ: 72 ಗಂಟೆಗಳಲ್ಲಿ 54 ಸಾವು, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

UP heat wave
Published on

ನವದೆಹಲಿ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಬಿಸಿಗಾಳಿ ಹಾಗೂ ಅಧಿಕ ಉಷ್ಣಾಂಶದಿಂದಾಗಿ 54 ಮಂದಿ ಮೃತಪಟ್ಟಿದ್ದು, 400ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಭವಿಸುತ್ತಿರುವ ಸಾವುಗಳಿಗೆ ವೈದ್ಯರು ವಿವಿಧ ಕಾರಣಗಳನ್ನು ಹೇಳಿದರೂ ಕೂಡ ತೀವ್ರ ಶಾಖ ಅಥವಾ ಉಷ್ಣಾಂಶ ಕೂಡ ಒಂದು ಪ್ರಮುಖ ಅಂಶವಾಗಿದೆ. ಬಿಸಿಗಾಳಿ, ಉಷ್ಣಾಂಶದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ತೀವ್ರ ಶಾಖ ಉತ್ತರ ಪ್ರದೇಶವನ್ನು ಬಾಧಿಸುತ್ತಿದ್ದು, ಅನೇಕ ಪ್ರದೇಶಗಳಲ್ಲಿ ಉಷ್ಣಾಂಶ 40 ಡಿಗ್ರಿ ದಾಟಿದೆ.

ಸಾವಿನ ಸಂಖ್ಯೆಯಲ್ಲಿ ದಿಢೀರ್​ ಏರಿಕೆಯಾಗಿದ್ದು, ಜ್ವರ, ಉಸಿರಾಟ ತೊಂದರೆ ಮತ್ತು ಇತರ ಸಮಸ್ಯೆಗಳಿಂದಾಗಿ ಅನೇಕ ಜನರು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹೈ ಅಲರ್ಟ್​ನಲ್ಲಿರುವಂತೆ ಸೂಚಿಸಲಾಗಿದೆ. ಜೂ. 15ರಂದು 23 ರೋಗಿಗಳು ಮೃತಪಟ್ಟರೆ, ಜೂ. 16ರಂದು 20 ಮತ್ತು ಜೂ. 17ರಂದು 11 ಮಂದಿ ಸಾವಿಗೀಡಾಗಿದ್ದಾರೆ ಎಂದು ಬಲ್ಲಿಯಾ ಜಿಲ್ಲಾಸ್ಪತ್ರೆಯ ಮೆಡಿಕಲ್​ ಸೂಪರಿಂಟೆಂಡೆಂಟ್​ ಎಸ್​.ಕೆ. ಯಾದವ್​ ತಿಳಿಸಿದ್ದಾರೆ.

ರಾಜಧಾನಿ ಲಖನೌದಿಂದ ತಂಡವೊಂದು ಬರುತ್ತಿದ್ದು, ಯಾವುದಾದರೂ ಕಾಯಿಲೆ ಬಾದಿಸುತ್ತಿದೆಯೇ ಎಂಬ ಪತ್ತೆ ಹಚ್ಚಲು ತನಿಖೆ ನಡೆಸಲಿದೆ ಎಂದು ಅಜಂಗಢ ಸರ್ಕಲ್‌ನ ಹೆಚ್ಚುವರಿ ಆರೋಗ್ಯ ನಿರ್ದೇಶಕ ಡಾ.ಬಿ.ಪಿ.ತಿವಾರಿ ಹೇಳಿದ್ದಾರೆ. ತುಂಬಾ ಬಿಸಿಯಾಗಿದ್ದಾಗ ಅಥವಾ ಶೀತವಾಗಿದ್ದಾಗ ಉಸಿರಾಟದ ರೋಗಿಗಳು, ಮಧುಮೇಹ ರೋಗಿಗಳು ಮತ್ತು ರಕ್ತದೊತ್ತಡ ರೋಗಿಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಪಾದರಸ ಪ್ರಮಾಣವು ಸ್ವಲ್ಪ ಹೆಚ್ಚಾಗುವುದು ಅವರ ಸಾವಿಗೆ ಕಾರಣವಾಗಬಹುದು ತಿವಾರಿ ಊಹಿಸಿದ್ದಾರೆ.

ಸದ್ಯ ಬಲ್ಲಿಯಾ ಜಿಲ್ಲಾಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಗಿದ್ದು, ರೋಗಿಗಳು ಸ್ಟ್ರೆಚರ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅನೇಕ ಅಟೆಂಡರ್‌ಗಳು ರೋಗಿಗಳನ್ನು ತುರ್ತು ವಿಭಾಗಕ್ಕೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ. ಹತ್ತು ರೋಗಿಗಳು ಒಂದೇ ಸಮಯದಲ್ಲಿ ಬಂದರೆ ಕಷ್ಟವಾಗುತ್ತದೆ ಎಂದು ತಿವಾರಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net