

ಬೆಂಗಳೂರು: ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ 01 ನವೆಂಬರ್, 2023 ರಿಂದ 01 ನವೆಂಬರ್ 2024 ರವರೆಗೆ ಕರ್ನಾಟಕ ಸಂಭ್ರಮ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತು ಚರ್ಚಿಸಲು ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದೇಶೀ ಕ್ರೀಡೆಗಳನ್ನು ಹಮ್ಮಿಕೊಳ್ಳಬೇಕು. ಕರ್ನಾಟಕದ ದೇಶೀ ಸಂಸ್ಕೃತಿ ಹೆಚ್ಚು ಬಿಂಬಿಸಬೇಕು, ಕನ್ನಡ ನಾಡು, ಸಂಸ್ಕೃತಿ ಮತ್ತು ಪ್ರಾದೇಶಿಕ ಭವ್ಯತೆಯನ್ನು ಈ ಸಂದರ್ಭದಲ್ಲಿ ಯುವ ಪೀಳಿಗೆಗೂ ಮುಟ್ಟಿಸುವ ರೀತಿ ಅರ್ಥಪೂರ್ಣ ಮತ್ತು ಸಂಭ್ರಮದ ಕಾರ್ಯಕ್ರಮಆಯೋಜಿಸಿ ಎಂದು ನಿರ್ದೇಶನ ನೀಡಿದರು. ನಾಡಿನ ಸಾಹಿತಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಅವರ ಸಲಹೆಗಳನ್ನು ಪಡೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ವಿಧಾನಸೌಧ ಹಾಗೂ ಶಾಸಕರ ಭವನದ ಮಧ್ಯೆ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸುವುದು, ಮೈಸೂರಿನಲ್ಲಿ ದೇವರಾಜ ಅರಸರ ಪ್ರತಿಮೆ ಸ್ಥಾಪನೆ, ಧಾರವಾಡದ ಅದರಗುಂಚಿ ಶಂಕರಗೌಡ , ಬಳ್ಳಾರಿಯ ಹುತಾತ್ಮ ರಂಜಾನ್ ಸಾಬ್ ಹಾಗೂ ಗದಗ ಜಿಲ್ಲೆಯ ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಅಭಿವೃದ್ಧಿ , ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳುವುದು ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನಿಸಲಾಯಿತು.
ಹಲ್ಮಿಡಿ ಶಾಸನದ ಪ್ರತಿಕೃತಿಗಳ ಸ್ಥಾಪನೆ, ಲೇಸರ್ ಶೋ/ ಧ್ವನಿ, ಬೆಳಕು ಕಾರ್ಯಕ್ರಮ, ಕರ್ನಾಟಕಕ್ಕೆ ಕೊಡುಗೆ ನೀಡಿದ 50 ಮಹಿಳೆಯರಿಗೆ ಪ್ರಶಸ್ತಿ ನೀಡುವುದು ಹಾಗೂ ನವೆಂಬರ್ 2024ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ಆಯೋಜಿಸಲು ಸಭೆ ನಿರ್ಧರಿಸಿತು.
ಕರ್ನಾಟಕ ಸಂಭ್ರಮ-50 ಕಾರ್ಯಕ್ರಮದ ಲಾಂಛನವನ್ನು ಅ.17 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು.
ಕರ್ನಾಟಕ ಎಂದು ನಾಮಕರಣ ಗೊಂಡು 50ನೇ ವರ್ಷವನ್ನು ಹಿಂದಿನ ಸರ್ಕಾರ ವೈಭವದಿಂದ ಆಚರಿಸಬೇಕಿತ್ತು. ಅಂದರೆ ನ.1, 2022 ರಿಂದ ನ.1, 2023ರ ವರೆಗೆ ಆಚರಿಸಬೇಕಿತ್ತು. ಹಿಂದಿನ ಸರ್ಕಾರ ಏಕೆ ಆಚರಿಸಲಿಲ್ಲ ? ಈ ನಿರ್ಲಕ್ಷ್ಯ ಸರಿನಾ ? ಎಂದು ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಈಗ 50 ವರ್ಷ ತುಂಬಿ 51ನೇ ವರ್ಷಕ್ಕೆ ಕಾಲಿಡಲಿದ್ದು, 50 ನೇ ವರ್ಷ ನವೆಂಬರ್ 2022 ರಂದೇ ಆಚರಿಸಬೇಕಿತ್ತು. ಹಿಂದಿನ ಸರ್ಕಾರ ಈ ವಿಚಾರದಲ್ಲಿ ಎಡವಿದೆ. 50 ವರ್ಷ ತುಂಬಿದ ನಂತರ ಮಾಡಲು ಹೊರಟರೆ ಅದಕ್ಕೆ ಮಹತ್ವವಿರುತ್ತದೆಯೇ ಕೇಳಿದರಲ್ಲದೆ, ನ.1,2023 ರಿಂದ ನ.1, 2024 ರ ವರೆಗೆ ಅರ್ಥಪೂರ್ಣವಾಗಿ ಆಚರಿಸುವ ಕುರಿತು ಸಿದ್ದರಾಮಯ್ಯ ನೇತೃತ್ವದ ಸಮಿತಿ ತೀರ್ಮಾನ ತೆಗೆದುಕೊಂಡಿತು.