ಮಾಸ್ಕ್​ ಧರಿಸದಿದ್ದರೆ ನೇರ ಜೈಲಿಗೆ, ಜತೆಗೆ ಭಾರಿ ದಂಡ! ಬಂದಿದೆ ಹೊಸ ನಿಯಮ…

mask
Published on

ವಯನಾಡು: ಲಾಕ್​ಡೌನ್​ ಸಮಯದಲ್ಲಿ ಹೊರಗಡೆ ಬರಬೇಡಿ, ಅಗತ್ಯ ವಸ್ತುಗಳ ಖರೀದಿ ಇದ್ದರೆ ಹೊರಗೆ ಬರಲೇಬಾಕಾದ ಸನ್ನಿವೇಶ ಇದ್ದರೆ ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ… ಈ ವಾಕ್ಯಗಳನ್ನು ಕಳೆದೆರಡು ತಿಂಗಳುಗಳಿಂದ ಅದೆಷ್ಟು ಸಲ ಕೇಳಿದ್ದೇವೋ ಲೆಕ್ಕೆಕ್ಕೇ ಇಲ್ಲ.

ಪೊಲೀಸರು, ಸರ್ಕಾರ, ವೈದ್ಯರು, ಆರೋಗ್ಯ ಕಾರ್ಯಕರ್ತರು, ಮಾಧ್ಯಮಗಳು ಎಷ್ಟೇ ಬುದ್ಧಿ ಹೇಳುತ್ತಿದ್ದರೂ ಕೆಲವರಿಗೆ ಇದು ತಲೆಯೊಳಕ್ಕೆ ಹೋಗುವುದೇ ಇಲ್ಲ. ತಾವೇ ನಡೆದಿದ್ದೇ ದಾರಿ ಎನ್ನುತ್ತಿದ್ದಾರೆ.

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ರಸ್ತೆಗಿಳಿದರೆ ಬಸ್ಕಿ ಹೊಡೆಸಿ ಆಯಿತು, ಲಾಠಿ ಬೀಸಿಯೂ ಆಯಿತು,,, ಏನು ಮಾಡಿದರೂ ಅಷ್ಟೆ ಎನ್ನುವ ಮನಸ್ಥಿತಿ ಹೆಚ್ಚಾಗುತ್ತಿದೆ. ಸದ್ಯ ಮಾಸ್ಕ್​ ಧರಿಸುವುದು ಅತ್ಯಂತ ಜರೂರು ಕೆಲಸವಾಗಿರುವ ಕಾರಣ, ಅದನ್ನು ಉಲ್ಲಂಘಿಸಿದವರಿಗೆ ಪೊಲೀಸ್​ ಇಲಾಖೆ ಭಯಂಕರ ಶಿಕ್ಷೆಯನ್ನು ಘೋಷಿಸಿದೆ. ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದೆ.

ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಕೇರಳದ ವಯನಾಡಿನಲ್ಲಿ. ಇಲ್ಲಿ ಯಾರೇ ಆಗಲಿ ಮಾಸ್ಕ್​ ಧರಿಸದೇ ರೋಡಿಗಿಳಿದರೆ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಜತೆಗೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಪೊಲೀಸ್​ ವರಿಷ್ಠಾಧಿಕಾರಿ ಇಲಾಂಗೊ ಹೇಳಿದ್ದಾರೆ. "ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಯನ್ನು ಕೇರಳ ಪೊಲೀಸ್‌ ಕಾಯ್ದೆ 118 ಇ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಜತೆಗೆ, ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗೆ 5,000 ದಂಡ ಪಾವತಿಸಬೇಕಾಗುತ್ತದೆ," ಎಂದು ಅವರು ಹೇಳಿದ್ದಾರೆ. ಇದು ಮಾಸ್ಕ್​ಗೆ ಸಂಬಂಧಿಸಿದಂತೆ ದೇಶದಲ್ಲಿ ವಿಧಿಸಲಾಗಿರುವ ಅತ್ಯಂತ ದುಬಾರಿ ದಂಡ ಇದಾಗಿದೆ.

"ಮಾಸ್ಕ್‌ ಧರಿಸದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗುವುದು. ದಂಡ ಹಾಗೂ ಶಿಕ್ಷೆಯ ವಿರುದ್ಧ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಬಹುದು. ಒಂದು ವೇಳೆ ನ್ಯಾಯಾಲಯದಲ್ಲಿ ಆ ವ್ಯಕ್ತಿ ತಪ್ಪಿತಸ್ಥ ಎಂದು ಸಾಬೀತಾದರೆ, 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಇದರ ಜತೆಗೆ, ಅಂಗಡಿಗಳಲ್ಲಿ ಕೆಲಸ ಮಾಡುವವರು ಗಿರಾಕಿಗಳಿಗೆ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಬೇಕು. ಹೀಗೆ ಮಾಡದೇ ಹೋದಲ್ಲಿ, ಅಂತಹ ಅಂಗಡಿಗೆ 1,000 ರೂ ದಂಡ ವಿಧಿಸಲಾಗುತ್ತದೆ," ಎಂದು ಅವರು ತಿಳಿಸಿದ್ದಾರೆ.

ಕೇರಳದಲ್ಲಿ ಇಲ್ಲಿಯವರೆಗೂ 486 ಕರೊನಾ ಸೋಂಕು ಪ್ರಕರಣ ದಾಖಲಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net