ಸಂಸ್ಕಾರಕ್ಕೆ 50 ವರ್ಷ

Samskara
Published on

| ಹರಿಹರಪುರ ಮಂಜುನಾಥ್

ಮೇ 13, 1970ರಂದು ಬಿಡುಗಡೆಯಾದ ‘ಸಂಸ್ಕಾರ’ ಚಿತ್ರವು ಕನ್ನಡ ಚಿತ್ರರಂಗವು ಅದುವರೆಗೂ ಸಾಗಿ ಬಂದಿದ್ದ ಹಾದಿಯನ್ನು ಸ್ಪಷ್ಟವಾದ ಲಕ್ಷಣಗಳೊಂದಿಗೆ ಕವಲೊಡೆಸಿದ ಸಿನಿಮಾ ಎಂದು ಧಾರಾಳವಾಗಿ ಹೇಳಬಹುದು. ಆ ಸಾಹಸಕ್ಕೆ ಇದೀಗ ಸ್ವರ್ಣ ಮಹೋತ್ಸವದ ಸಂಭ್ರಮ. ಅಂದು ಆರಂಭವಾದ ಕನ್ನಡ ಆರ್ಟ್ ಫಿಲಂ ಪರಂಪರೆ ಇಂದಿಗೂ ಅಬಾಧಿತವಾಗಿ ಮುಂದುವರೆದಿದೆ. ಪ್ರತಿ ವರ್ಷ, ಒಂದಿಷ್ಟು ಪ್ರಶಸ್ತಿಗಳಿಗೆ ಭಾಜನವಾಗುತ್ತಾ ಕನ್ನಡದ ಕೀರ್ತಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಕಾರಣವಾಗಿದೆ.

ವ್ಯಾಪಾರಿ ಸೂತ್ರಗಳಿಂದ ಹೊರತಾದ ಹೊಸ ಅಲೆ, ಕಲಾತ್ಮಕ, ಸಮಾನಾಂತರ ... ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಚಿತ್ರಗಳು ಆ ಹೊತ್ತಿಗಾಗಲೇ ಬಂಗಾಳಿ, ಹಿಂದಿ, ಮರಾಠಿ ... ಹೀಗೆ ಕೆಲವು ಭಾಷೆಗಳಲ್ಲಿ ಕಣ್ಣುಬಿಟ್ಟು ಬೆಳೆಯತೊಡಗಿದ್ದವು. ದೇಶಾದ್ಯಂತ ಇಂಥ ಚಿತ್ರಗಳು ತಮ್ಮದೇ ಆದ ಒಂದು ಪ್ರೇಕ್ಷಕವರ್ಗವನ್ನು ಸೃಷ್ಟಿಸಿಕೊಂಡು ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದವು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೊಡ ಮಾಡುವ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲೂ ಇಂಥ ಸಿನಿಮಾಗಳು ಮುಂಚೂಣಿಗೆ ಬರಲಾರಂಭಿಸಿದ್ದವು.

ಕನ್ನಡದಲ್ಲಿ ಆ ಹೊತ್ತಿಗಾಗಲೇ ಎನ್. ಲಕ್ಷ್ಮೀನಾರಾಯಣ್ (ನಾಂದಿ ಮತ್ತು ಉಯ್ಯಾಲೆ), ಎಂ.ಆರ್. ವಿಠಲ್ (ಮಿಸ್ ಲೀಲಾವತಿ), ಚದುರಂಗ (ಸರ್ವಮಂಗಳ), ಕೆ.ಎಸ್.ಎಲ್. ಸ್ವಾಮಿ (ತೂಗುದೀಪ), ಜಿ.ವಿ. ಅಯ್ಯರ್ (ಚೌಕದ ದೀಪ) ಮೊದಲಾದ ಸೂಕ್ಷ್ಮಸಂವೇದನೆಯ ನಿರ್ದೇಶಕರು ವ್ಯಾಪಾರಿ ಸೂತ್ರಗಳ ನಡುವೆಯೂ ಒಂದಿಷ್ಟು ಭಿನ್ನ ಆಲೋಚನೆಗಳನ್ನಿಟ್ಟುಕೊಂಡು ಸಿನಿಮಾಗಳನ್ನು ಮಾಡಿದ್ದರು. ಇಂಥದ್ದೊಂದು ಪರ್ವಕಾಲದಲ್ಲಿ ಕನ್ನಡ ನವ್ಯಸಾಹಿತ್ಯ ಪರಂಪರೆಯ ಪ್ರವರ್ತಕರಲ್ಲೊಬ್ಬರೆನಿಸಿದ್ದ ಡಾ.ಯು.ಆರ್. ಅನಂತಮೂರ್ತಿಯವರ ವಿವಾದಾತ್ಮಕ ಕಾದಂಬರಿ ‘ಸಂಸ್ಕಾರ’, ಸೆಲ್ಯುಲಾಯ್ಡ್​​ನಲ್ಲಿ ಮೂಡಿ ಬಂದಿತ್ತು.

ಎಲ್ಲರೂ ಹೊಸಬರೇ: ಕೇವಲ 90 ಸಾವಿರ ರೂಪಾಯಿ ಬಜೆಟ್​ನಲ್ಲಿ ತೆರೆಗೆ ಬಂದ ‘ಸಂಸ್ಕಾರ’ದಿಂದ ಮುಂದೆ ಬಹಳಷ್ಟು ಮಂದಿ ಪ್ರತಿಬಾವಂತರು ಚಿತ್ರರಂಗಕ್ಕೆ ಬರುವಂತಾಯಿತು. ಅಲ್ಲಿಂದ ಮುಂದೆ ಕನ್ನಡ ಸಮಾನಾಂತರ ಚಿತ್ರ ಪರಂಪರೆ ಹುಲುಸಾಗಿ ಬೆಳೆಯಿತೆನ್ನುವುದು ಉದ್ಯಮದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಗಮನಾರ್ಹ.

ಪಟ್ಟಾಭಿರಾಮರೆಡ್ಡಿಯವರು ನಿರ್ದೇಶಿಸಿದ ‘ಸಂಸ್ಕಾರ’ ಚಿತ್ರಕ್ಕೆ ಸಿಂಗೀತಂ ಶ್ರೀನಿವಾಸ್ ರಾವ್ ಅವರು ತಾಂತ್ರಿಕ ನಿರ್ದೇಶಕರಾಗಿದ್ದರು ಎನ್ನುವುದೊಂದು ವಿಶೇಷ. ಪಾತ್ರ ವರ್ಗದಲ್ಲಿದ್ದ ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ಸಿ.ಆರ್. ಸಿಂಹ, ಲೋಕನಾಥ್, ಭಾರ್ಗವಿ ನಾರಾಯಣ್ ಇವರೆಲ್ಲ ಮುಂದೆ ಕನ್ನಡ ಕಲಾತ್ಮಕ ಚಿತ್ರಪರಂಪರೆಯಲ್ಲಿ ಹಲವು ರೀತಿಯಲ್ಲಿ ತೊಡಗಿಸಿಕೊಂಡರೆನ್ನುವುದು ಗಮನಾರ್ಹ. ರಾಜೀವ್ ತಾರಾನಾಥ್ ಅವರ ಹಿನ್ನೆಲೆ ಸಂಗೀತ ಹಾಗೂ ಟಾಂ ಕೋವನ್ ಅವರ ಕ್ಯಾಮರಾ ಕೆಲಸ ಇಂದಿಗೂ ‘ಸಂಸ್ಕಾರ’ವನ್ನು ಆಸ್ವಾದಿಸುವಂತೆ ಮಾಡುವಲ್ಲಿ ಸಫಲವಾಗಿದೆ.

ಇದನ್ನೂ ಓದಿ: ರಚಿತಾ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದು ಯಾಕೆ? ಆಮೇಲೆ ನಡೆದದ್ದು ಇತಿಹಾಸ!: ಹಾಡು-ನೃತ್ಯಗಳಿಲ್ಲದ ಖ್ಯಾತನಾಮ ಕಲಾವಿದರಿಲ್ಲದ, ಸಿದ್ಧಸೂತ್ರದ ನಿರೂಪಣಾ ಕ್ರಮದಿಂದ ಹೊರತಾದ ‘ಸಂಸ್ಕಾರ’ ಚಿತ್ರವು ಬೆಂಗಳೂರಿನ ಸ್ಟೇಟ್ಸ್ (ಈಗಿನ ಭೂಮಿಕಾ) ಹಾಗೂ ಮಿನರ್ವ ಚಿತ್ರಮಂದಿರಗಳಲ್ಲಿ ನಾಲ್ಕು ವಾರಗಳ ಯಶಸ್ವಿ ಪ್ರದರ್ಶನ ಕಾಣುವುದರೊಂದಿಗೆ ವ್ಯಾಪಾರಿ ದೃಷ್ಟಿಯಿಂದಲೂ ಗೆಲುವು ಸಾಧಿಸಿತು. ಇನ್ನು ಪ್ರಶಸ್ತಿಗಳ ವಿಚಾರಕ್ಕೆ ಬಂದರೆ, ‘ಸಂಸ್ಕಾರ’ ಚಿತ್ರದ್ದು ದೊಡ್ಡ ಸಾಧನೆ ಎನ್ನಬಹುದು. 1970-71ರ ಶ್ರೇಷ್ಠ ಭಾರತೀಯ ಚಿತ್ರವೆಂಬ ಗೌರವಕ್ಕೆ ಪಾತ್ರವಾಗಿ ಸ್ವರ್ಣ ಕಮಲ ರಾಷ್ಟ್ರೀಯ ಪ್ರಶಸ್ತಿ, ನಿರ್ದೇಶಕ ಪಟ್ಟಾಭಿರಾಮರೆಡ್ಡಿಯವರಿಗೆ ರಜತ ಕಮಲ ಪ್ರಶಸ್ತಿ, ಜತೆಗೆ ನಾಲ್ಕು ರಾಜ್ಯ ಪ್ರಶಸ್ತಿಗಳು (ದ್ವಿತೀಯ ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಥೆ, ಅತ್ಯುತ್ತಮ ಛಾಯಾಗ್ರಹಣ ಅತ್ಯುತ್ತಮ ಪೋಷಕ ನಟ) ‘ಸಂಸ್ಕಾರ’ದ ಗೌರವವನ್ನು ಹೆಚ್ಚಿಸಿದವು. 1972ರ ಲೊಕಾನೋ ಚಲನಚಿತ್ರೋತ್ಸವದಲ್ಲಿ ಕಂಚಿನ ಚಿರತೆಯ ಪ್ರಶಸ್ತಿ ಗಳಿಸುವ ಮೂಲಕ ‘ಸಂಸ್ಕಾರ’ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿತು.

ವಿವಾದ ಮುಂದುವರಿಕೆ

ಕನ್ನಡದ ಮಟ್ಟಿಗೆ ಮೊಟ್ಟ ಮೊದಲ ಪೂರ್ಣಪ್ರಮಾಣದ ಕಲಾತ್ಮಕ ಚಿತ್ರವೆಂದು ಪರಿಗಣಿತವಾಗಿರುವ ‘ಸಂಸ್ಕಾರ’ ಚಲನಚಿತ್ರ ರೂಪವೂ ವಿವಾದಗಳಿಂದ ಹೊರತಾಗಲಿಲ್ಲ. ಒಂದು ಜಾತಿಯ ಜನರ ಭಾವನೆಗಳನ್ನು ಕೆರಳಿಸುವಂಥ ಅಂಶಗಳು ಈ ಸಿನಿಮಾದಲ್ಲಿವೆ ಎಂಬ ಕಾರಣ ನೀಡಿ ಆ ದಿನಗಳಲ್ಲಿ ಕನ್ನಡ ಚಿತ್ರಗಳು ಸೆನ್ಸಾರ್ ಆಗುತ್ತಿದ್ದ ಮದ್ರಾಸ್ ಸೆನ್ಸಾರ್ ಬೋರ್ಡ್, ಚಿತ್ರವನ್ನು ಬ್ಯಾನ್ ಮಾಡಿತ್ತು. ಮುಂದೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯು ಮಧ್ಯೆ ಪ್ರವೇಶಿಸಿ ಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net