

ಬೆಳಗಾವಿ: ಕರೊನಾ ವೈರಸ್ ನಡುವೆಯೂ ಬೆಳಗಾವಿ ಜಿಲ್ಲಾ ಆಸ್ಪತ್ರೆ (ಬಿಮ್ಸ್)ಯ ವೈದ್ಯಕೀಯ ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಮತ್ತು ಮಕ್ಕಳ ಆರೋಗ್ಯ ಕಾಪಾಡುತ್ತಿದ್ದಾರೆ. ಡಿಸೆಂಬರ್ನಿಂದ ಈವರೆಗೂ ಸುಮಾರು 3 ಸಾವಿರ ಹೆರಿಗೆಗಳಾಗಿದ್ದು, ಸಿಬ್ಬಂದಿ ಶ್ರಮದ ಪ್ರತಿಫಲವಾಗಿ ತಾಯಿ ಮತ್ತು ಮಗು ಆರೋಗ್ಯಪೂರ್ಣವಾಗಿ ಮನೆ ಸೇರಿದ್ದಾರೆ.
ಜಿಲ್ಲೆಯಲ್ಲಿ ಕರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳೂ ಹೆಚ್ಚುತ್ತಿವೆ. ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಗರ್ಭಿಣಿ, ಬಾಣಂತಿಯರು ಹಾಗೂ ಇವರ ಸಂಬಂಧಿಕರು ಭಯಭೀತರಾಗಿದ್ದರು. ಆದರೆ, ಆಸ್ಪತ್ರೆ ಸಿಬ್ಬಂದಿ ಹೆರಿಗೆಗಳನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಅವರೆಲ್ಲರ ಭೀತಿ ದೂರ ಮಾಡಿದ್ದಾರೆ.
ಕರೊನಾ ಸೋಂಕು ಹಿನ್ನೆಲೆಯಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಹೆರಿಗೆ ಆದ 24 ಗಂಟೆಗಳಲ್ಲಿ ಬಾಣಂತಿಯರನ್ನು ಮನೆಗೆ ಕಳುಹಿಸಿಕೊಡಲಾಗುತ್ತಿದೆ. ಈ ಮೊದಲು ಆರೋಗ್ಯವಾಗಿರುವ ಬಾಣಂತಿಯರನ್ನು 48 ಗಂಟೆಗಳ ಬಳಿಕ ಮನೆ ಕಳುಹಿಸಲಾಗುತ್ತಿತ್ತು. ಆದರೆ, ಸದ್ಯ ಬಾಣಂತಿಯರು ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರುವುದಕ್ಕೆ ಮನಸ್ಸು ಮಾಡಿದರೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಹೆರಿಗೆ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ. ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿದ್ದೇವೆ. ಹೆರಿಗೆ ಬಳಿಕ ಆಂಬುಲೆನ್ಸ್ ಮೂಲಕ ತಾಯಿ ಹಾಗೂ ಮಗುವನ್ನು ಅವರ ಮನೆಗಳಿಗೆ ತಲುಪಿಸಲಾಗುತ್ತಿದೆ.| ಡಾ.ವಿನಯ ದಾಸ್ತಿಕೊಪ್ಪ ಬಿಮ್ಸ್ ನಿರ್ದೇಶಕ