ಒಲಿಂಪಿಕ್ಸ್‌ನಲ್ಲಿ 5 ಸ್ವರ್ಣ ಪದಕ ಬೇಟೆಯಾಡಿದ ಅಮೆರಿಕದ ಚಿನ್ನದ ಮೀನು ಡ್ರೆಸ್ಸೆಲ್

swim web
Published on

ಟೋಕಿಯೊ: ಅಮೆರಿಕದ ಈಜು ತಾರೆ ಕೇಲೆಬ್ ಡ್ರೆಸೆಲ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 5 ಸ್ವರ್ಣ ಪದಕಗಳನ್ನು ಜಯಿಸುವ ಮೂಲಕ ಈಜುಕೊಳದಲ್ಲಿ ಚಿನ್ನದ ಮೀನಿನಂತೆ ಮಿನುಗಿದ್ದಾರೆ. 4/100 ಮೀ. ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಅಮೆರಿಕ ತಂಡ 3 ನಿಮಿಷ, 26.78 ಸೆಕೆಂಡ್‌ಗಳಲ್ಲಿ ಈಜಿ ವಿಶ್ವದಾಖಲೆ ನಿರ್ಮಿಸುವುದರೊಂದಿಗೆ ಡ್ರೆಸೆಲ್ 5ನೇ ಚಿನ್ನದ ಪದಕ ಗೆದ್ದು ಬೀಗಿದರು.

ಇದಕ್ಕೆ ಮುನ್ನ 50 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲೂ 21.07 ಸೆಕೆಂಡ್‌ಗಳಲ್ಲಿ ಈಜಿ ಒಲಿಂಪಿಕ್ಸ್ ದಾಖಲೆ ಬರೆಯುವುದರೊಂದಿಗೆ ಕೂಟದ ಅತಿವೇಗದ ಈಜುಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಶನಿವಾರ 100 ಮೀ. ಬಟರ್‌ಫ್ಲೈನಲ್ಲಿ ಚಿನ್ನ ಗೆದ್ದಿದ್ದ ಅವರು, ಗುರುವಾರ 100 ಮೀ. ಫ್ರೀಸ್ಟೈಲ್‌ನಲ್ಲಿ ಕೂಟದ 2ನೇ ಸ್ವರ್ಣ ಪದಕ ಒಲಿಸಿಕೊಂಡಿದ್ದರು. ಜುಲೈ 26ರಂದು 4/100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಅಮೆರಿಕ ತಂಡದ ಜತೆಗೆ ಅವರು ಕೂಟದ ಮೊದಲ ಸ್ವರ್ಣ ಪದಕ ಜಯಿಸಿದ್ದರು.

ಅಮೆರಿಕ ತಂಡದಲ್ಲಿ ದಿಗ್ಗಜ ಮೈಕೆಲ್ ಫೆಲ್ಫ್ಸ್​​ ಸ್ಥಾನವನ್ನು ಸಮರ್ಥವಾಗಿ ತುಂಬಿರುವ 24 ವರ್ಷದ ಡ್ರೆಸೆಲ್ ಒಂದೇ ಒಲಿಂಪಿಕ್ಸ್‌ನಲ್ಲಿ 5 ಚಿನ್ನದ ಪದಕ ಜಯಿಸಿದ 5ನೇ ಈಜುಪಟು ಎನಿಸಿದರು. ಅಮೆರಿಕದವರೇ ಆದ ಮಾರ್ಕ್ ಆಂಡ್ರೋ ಸ್ಪಿಟ್ಜ್ (1972ರಲ್ಲಿ 7ಚಿನ್ನ), ಮ್ಯಾಥ್ಯೂ ನಿಕೋಲಸ್ ಬಿಯೊಂಡಿ (1988ರಲ್ಲಿ 5 ಚಿನ್ನ), ಮೈಕೆಲ್ ಫೆಲ್ಫ್ಸ್​​ (2008ರಲ್ಲಿ 8 ಚಿನ್ನ, 2004ರಲ್ಲಿ 6 ಚಿನ್ನ, 2016ರಲ್ಲಿ 5 ಚಿನ್ನ) ಮತ್ತು ಪೂರ್ವ ಜರ್ಮನಿಯ ಮಹಿಳಾ ಈಜುಪಟು ಕ್ರಿಸ್ಟಿನ್ ಒಟ್ಟೋ (1988ರಲ್ಲಿ 6 ಚಿನ್ನ) ಹಿಂದಿನ ಸಾಧಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net