ಕೊಲೆ ಪ್ರಕರಣದ ಸುತ್ತ ಕಾಗೆ ಹಾರಾಟ: ಇದು 5 ಅಡಿ 7 ಅಂಗುಲ ಎತ್ತರದವರಿಗೆ ಮಾತ್ರ!

dfh
Published on

ಹೊಸಬರು ಹೊಸಥರದ ಶೀರ್ಷಿಕೆ ಮೂಲಕ ಗಮನ ಸೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇದೀಗ ಆ ಸಾಲಿಗೆ ‘5 ಅಡಿ 7 ಅಂಗುಲ’ ಸಿನಿಮಾ ಸೇರ್ಪಡೆಗೊಳ್ಳುತ್ತಿದೆ. ಶೀರ್ಷಿಕೆ ಅರ್ಥ ಹುಡುಕ ಹೊರಟರೆ ಇದು ನಾಯಕನ ಅಥವಾ ನಾಯಕಿಯ ಎತ್ತರವಲ್ಲ. ಬದಲಿಗೆ ಅದು ಭಾರತೀಯನ ಸರಾಸರಿ ಎತ್ತರ. ಹಾಗಾದರೆ, ಸಿನಿಮಾದ ಕಥೆ ಏನು? ಅದನ್ನು ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಂದ ಚಿತ್ರತಂಡ, ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸಿನಿಮಾದೊಳಗೇನಿದೆ ಎಂಬುದನ್ನು ಹೇಳಿಕೊಂಡಿತು.

ಮೊದಲಿಗೆ ಮಾತಿಗಿಳಿದ ನಿರ್ದೇಶಕ ನಂದಳಿಕೆ ನಿತ್ಯಾನಂದ ಪ್ರಭು, ‘ಸಸ್ಪೆನ್ಸ್ ಥ್ರಿಲ್ಲರ್ ಶೈಲಿಗೆ ‘5 ಅಡಿ 7 ಅಂಗುಲ’ ಸಿನಿಮಾದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ತಂತ್ರ, ಯುಕ್ತಿ, ಚೇಷ್ಟೆ ಮತ್ತು ಕುತಂತ್ರ, ಕುಯುಕ್ತಿ, ಕುಚೇಷ್ಟೆ ಈ ಮೂರು ವ್ಯತ್ಯಾಸಗಳನ್ನು ಆಧರಿಸಿ ಸಿನಿಮಾ ಮಾಡಿದ್ದೇವೆ. ಇದೆಲ್ಲದರ ಜತೆಗೆ ಶೀರ್ಷಿಕೆಗೂ ಚಿತ್ರದ ಕಥೆಯಲ್ಲಿ ನ್ಯಾಯ ಒದಗಿಸಿದ್ದೇವೆ. ಉದ್ಯಮಿಯೊಬ್ಬನ ಕೊಲೆಯ ಸುತ್ತ ಈ ಸಿನಿಮಾ ಸುತ್ತುತ್ತದೆ. ಆ ಕೊಲೆಯೂ ಅಷ್ಟೇ ರೋಚಕ ತಿರುವುಗಳ ಮೂಲಕ ಸೀಟಿನ ತುದಿಗೆ ತಂದು ಕೂರಿಸಲಿದೆ. ಹುಡುಕಾಟ ಮತ್ತು ತನಿಖೆಯೂ ಇಲ್ಲಿರಲಿದೆ. ಕಾಗೆಯೂ ಇಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದೆ’ ಎಂದು ಹೇಳಿಕೊಳ್ಳುತ್ತಾರೆ.

ಚಿತ್ರದಲ್ಲಿ ರಾಸಿಕ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡರೆ, ಅದಿತಿ ನಾಯಕಿಯಾಗಿ ನಟಿಸಿದ್ದಾರೆ. ಭುವನ್ ನಾರಾಯಣ್ ಗೆಳೆಯನಾಗಿ ಕಾಣಿಸಿಕೊಂಡಿದ್ದು, ವೀಣಾ ಸುಂದರ್, ಸತ್ಯನಾಥ್, ಪ್ರಣವಮೂರ್ತಿ, ಚಕ್ರವರ್ತಿ ದಾವಣಗೆರೆ, ಮಹದೇವ, ಮಾ. ಮಹೇಂದ್ರಪ್ರಸಾದ್, ಕೃಷ್ಣಮೂರ್ತಿ.ವಿ, ನರೇಂದ್ರ, ವಿನಯ್ಕುಮಾರ್ ಪಾತ್ರವರ್ಗದಲ್ಲಿದ್ದಾರೆ. ಒಂದು ತಾಸು 50 ನಿಮಿಷದ ಈ ಚಿತ್ರವನ್ನು ಬೆಂಗಳೂರು, ಮೈಸೂರು, ಶುಂಠಿಕೊಪ್ಪದಲ್ಲಿ ಚಿತ್ರೀಕರಣ ಮಾಡಲಾಗಿದೆ. ರಘು ಠಾಣೆ ಸಂಗೀತ, ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ನೆಲಮಂಗಲ, ಮಡಿಕೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ನಿತ್ಯಾನಂದ ಪ್ರಭು ಮತ್ತು ಅವರ ತಂದೆ ನಂದಳಿಕೆ ಚಂದ್ರಶೇಖರ್ ಪ್ರಭು ನಿರ್ವಣದಲ್ಲಿ ಈ ಚಿತ್ರ ತಯಾರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net