

ನವದೆಹಲಿ : ನಾಳೆಯಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕರೊನಾ ಲಸಿಕೆ ನೀಡಲು ಆದೇಶ ಹೊರಡಿಸಲಾಗಿದೆ. ಕರೊನಾ ಎರಡನೇ ಅಲೆ ಅಪ್ಪಳಿಸಿರುವ ಈ ಸಮಯದಲ್ಲಿ ಲಸಿಕಾ ಅಭಿಯಾನವು ಹೆಚ್ಚಿನ ಮಹತ್ವ ಪಡೆದಿದೆ. ಹೀಗಾಗಿ ಈವರೆಗೆ ಲಸಿಕೆ ನೀಡುವ ಕಾರ್ಯ ಹೇಗೆ ನಡೆದಿದೆ ಮತ್ತು ಮುಂದಿನ ಹಂತಕ್ಕೆ ಬೇಕಾಗುವ ಸಿದ್ಧತೆಗಳೇನು ಎಂಬುದರ ಬಗ್ಗೆ ಇಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳೊಂದಿಗೆ ಸಭೆ ನಡೆಸಿತು.
ವಿಡಿಯೋ ಕಾನ್ಫರೆಂಸಿಂಗ್ ಮೂಲಕ ನಡೆದ ಈ ಸಭೆಯಲ್ಲಿ ಕೇಂದ್ರವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕಾಕರಣ ಸಮರ್ಪಕವಾಗಿ ನಡೆಯುತ್ತಿಲ್ಲದ ಪ್ರದೇಶಗಳನ್ನು ಗುರುತಿಸಿ, ಪರಿಸ್ಥಿತಿ ಸುಧಾರಿಸುವ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದೆ. ವಿಶೇಷವಾಗಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಲಸಿಕೆ ಎಲ್ಲರನ್ನೂ ತಲುಪುವ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸೂಚಿಸಿದೆ.
ಈ ಮಧ್ಯೆ, ಕಳೆದ 24 ಗಂಟೆಗಳಲ್ಲಿ, ಭಾರತದಾದ್ಯಂತ 53,480 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ದೇಶಾದ್ಯಂತ ಹಾಲಿ 5.52 ಲಕ್ಷಕ್ಕೂ ಹೆಚ್ಚು ಆ್ಯಕ್ಟೀವ್ ಕೇಸುಗಳಿದ್ದು, ಸಾವಿನ ಸಂಖ್ಯೆಯು 1,62,468 ತಲುಪಿದೆ. ಭಾರತದಲ್ಲಿ ಈವರೆಗೆ 1,21,49,335 ಜನರಲ್ಲಿ ಕರೊನಾ ಸೋಂಕು ಕಂಡುಬಂದಿದ್ದು, 1,14,34,301 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಮಂಗಳವಾರದಂದು 354 ಕರೊನಾ ಸಾವುಗಳು ಸಂಭವಿಸಿದ್ದು, ಇದು ಕಳೆದ ಡಿಸೆಂಬರ್ 16 ರ ನಂತರದ ಅತ್ಯಧಿಕ ಸಂಖ್ಯೆಯ ಸಾವುಗಳ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ 140 ಸಾವುಗಳುಂಟಾಗಿದ್ದು, ಪಂಜಾಬ್ನಲ್ಲಿ 64, ಛತ್ತೀಸಗಡದಲ್ಲಿ 35, ಕರ್ನಾಟಕದಲ್ಲಿ 21, ತಮಿಳುನಾಡಿನಲ್ಲಿ 16, ಮಧ್ಯಪ್ರದೇಶದಲ್ಲಿ 10 ಮತ್ತು ಉತ್ತರಪ್ರದೇಶದಲ್ಲಿ 10 ಸಾವುಗಳು ವರದಿಯಾಗಿವೆ. (ಏಜೆನ್ಸೀಸ್)