

ಮೆಕ್ಸಿಕೋ : ಕರೊನಾ ಎರಡನೇ ಅಲೆ ಶುರುವಾಗುತ್ತಿರುವಂತೆಯೇ ಮತ್ತೆ ಮಾಸ್ಕ್ನ ಸರಬರಾಜು ಹೆಚ್ಚಿಸುವ ಅಗತ್ಯ ಬೀಳಲಿದೆ. ಈ ಸಂದರ್ಭಕ್ಕೆ ಮೆಕ್ಸಿಕೋದ ಡಿಸೈನರ್ಗಳು ಮೂಗಿಗೆ ಮಾತ್ರ ಹಾಕಿಕೊಳ್ಳುವ ಮಾಸ್ಕ್ಗಳನ್ನೂ ರೂಪಿಸಿದ್ದಾರೆ. ಹೊರಗಡೆ ಹೋಗಿ ತಿನ್ನುವಾಗ, ಮಾತನಾಡುವಾಗ ಮೂಗಿನೊಳಕ್ಕೆ ಕರೊನಾ ವೈರಸ್ ಹೋಗದಿರಲು ಈ ಮಾಸ್ಕ್ ಉಪಯೋಗಿಸಿ ಎಂದಿದ್ದಾರೆ.
ಮನೆಯಿಂದ ಹೊರಗೆ ಹೋಗಬೇಕಾದರೆ ಮಾಸ್ಕ್ ಹಾಕಿಕೊಳ್ಳುವ ಸಾರ್ವಜನಿಕರು, ರೆಸ್ಟೊರೆಂಟಲ್ಲಿ ಆಹಾರ ಸೇವಿಸಬೇಕೆಂದರೆ ಅದನ್ನು ತೆಗೆಯಲೇ ಬೇಕಾಗುತ್ತದೆ. ಈ ಪರಿಸ್ಥಿತಿಗೆ ಪರಿಹಾರವನ್ನು ಮೆಕ್ಸಿಕೋ ನಗರದ ಮಾಸ್ಕ್ ಉತ್ಪಾದಕರು ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಹಾಕಿಕೊಳ್ಳುವ ಮಾಸ್ಕ್ ಒಳಗೆ 'ಈಟಿಂಗ್ ಮಾಸ್ಕ್' ಎಂದೇ ಕರೆಯಲಾಗಿರುವ ಈ ಹೊಸ ಡಿಸೈನಿನ ಪುಟಾಣಿ ಮಾಸ್ಕ್ಅನ್ನು ಧರಿಸಬಹುದು. ಆಹಾರ ಸೇವಿಸಬೇಕಾದಾಗ ಹೊರಗಿನ ಮಾಸ್ಕ್ ಮಾತ್ರ ತೆಗೆದು ತಿಂದು ಕುಡಿದು ಮಾಡಬಹುದು ಎಂದು ಉತ್ಪಾದಕರು ಹೇಳಿದ್ದಾರೆ.
ಇಬ್ಬರು ವೃದ್ಧರು ಈ ನೋಸ್-ಏನ್ಲಿ ಮಾಸ್ಕ್ಅನ್ನು ಹಾಕಿಕೊಂಡು ರೆಸ್ಟೊರೆಂಟೊಂದರಲ್ಲಿ ಕೂತು ಆರಾಮವಾಗಿ ತಿಂದು ಕುಡಿದು ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇತ್ತೀಚೆಗೆ ರಿಯಟರ್ಸ್ ಸುದ್ದಿ ಸಂಸ್ಥೆ ಟ್ವಿಟರ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ನಾಲ್ಕುವರೆ ಲಕ್ಷ ವೀಕ್ಷಣೆ ಪಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಮೂಡಿಬರುತ್ತಿವೆ.
ಈ ಮಾಸ್ಕ್ ಬಗ್ಗೆ ಹತ್ತು ಹಲವಾರು ತಮಾಷೆಯ ಮೀಮ್ಗಳು ಮತ್ತು ಕಾಮೆಂಟ್ಗಳು ಮೂಡಿಬಂದಿವೆ. ಕ್ಲೌನ್ ನೋಸ್ಗಳ ಚಿತ್ರಗಳನ್ನು ಹಾಕಿದ ಹಲವರು, ಇದರಲ್ಲಿ ಹೊಸತೇನಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ಬಾಯಿಂದ ವೈರಸ್ ಒಳಹೋಗುವ ಸಾಧ್ಯತೆ ಇದ್ದೇ ಇದೆ ಎಂದು ಎಚ್ಚರಿಸಿದ್ದಾರೆ. ಮತ್ತೆ ಕೆಲವರು ಮಾಸ್ಕ್ ಹಾಕುವುದು ಬರೀ ನಮಗಾಗಿ ಅಲ್ಲ, ಬೇರೆಯವರ ರಕ್ಷಣೆಗೆ ಕೂಡ. ಇದನ್ನು ಹಾಕಿಕೊಂಡು ನೀವು ಕೆಮ್ಮಿದರೆ ಬೇರೆಯವರಿಗೆ ಆಪತ್ತು ಎಂದಿದ್ದಾರೆ. (ಏಜೆನ್ಸೀಸ್)