

ಮಂಜೇಶ್ವರ: ದೈಗೋಳಿ ಜ್ಞಾನೋದಯ ಸಮಾಜ ಆಶ್ರಯದಲ್ಲಿ ಶ್ರೀ ಗಣೇಶ ಮಂದಿರದಲ್ಲಿ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7ರಂದು ಕುರಿಯ ರಾಮಮೂರ್ತಿ ಪೌರೋಹಿತ್ಯದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.
ಬೆಳಗ್ಗೆ 8.30ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಮಹಾಗಣಪತಿ ಹೋಮ, ಭಕ್ತಿಗೀತೆ, ಛದ್ಮವೇಷ ಸ್ಪರ್ಧೆ, ಭಗವದ್ಗೀತೆ ಪಾರಾಯಣ, ಸಂಗೀತ ಕುರ್ಚಿ, ಮಡಕೆ ಒಡೆಯುವ ಸ್ಪರ್ಧೆ ನಡೆಯಲಿದೆ. ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರ ವತಿಯಿಂದ ಭಜನಾ ಕಾರ್ಯಕ್ರಮ, ಕೋಳ್ಯೂರುಪದವು ಶ್ರೀ ಸತ್ಯನಾರಾಯಣ ಭಜನಾ ಮಂದಿರ ವತಿಯಿಂದ ಕುಣಿತ ಭಜನೆ ನಡೆಯಲಿದೆ. ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.
ಅಪರಾಹ್ನ ಪ್ರಸಿದ್ಧ ಮೇಳದ ಕಲಾವಿದರಿಂದ ಸುದರ್ಶನ ವಿಜಯ ಯಕ್ಷಗಾನ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವಿ ಪಡೆದ ಕೊಣಿಲ ರಾಘವೇಂದ್ರ ಭಟ್ ಸುಳ್ಯಮೆ, ನಿವೃತ್ತ ಯೋಧ ದಿನಕರ ಕೋಟ್ಯಾನ್ ಸುಳ್ಯಮೆ, ಸಮಾಜ ಸೇವಾ ಕಾರ್ಯಕ್ಕೆ ಕೋಳ್ಯೂರು ಸ್ಪಂದನ ಟ್ರಸ್ಟ್ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಮಹಾ ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಶೋಭಾಯಾತ್ರೆ ಪ್ರಾರಂಭವಾಗಲಿದೆ. ಶೋಭಾಯಾತ್ರೆ ಶ್ರೀ ಗಣೇಶ ಮಂದಿರದಿಂದ ಹೊರಟು ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರ, ದೈಗೋಳಿ ಕಟ್ಟೆ, ಅಡಕಳಕಟ್ಟೆ ಶ್ರೀ ಗಣೇಶಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ, ಅಡಕಳಕಟ್ಟೆ ಜಂಕ್ಷನ್, ತುಪ್ಪೆ, ಉರ್ಣಿಯಾಗಿ ಕಣಿಯೂರು ಸಾರ್ವಜನಿಕ ಕೆರೆಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ನಡೆಯಲಿದೆ. ನಂತರ ಕಣಿಯೂರು ಶ್ರೀ ಗಣೇಶ ಭಕ್ತವೃಂದ ವತಿಯಿಂದ ಅನ್ನ ಸಂತರ್ಪಣೆ ನಡೆಯಲಿದೆ.