ಬಿಹಾರದಲ್ಲಿ ಹೆಂಡತಿ, ದೆಹಲಿಯಲ್ಲಿ ಗರ್ಲ್​ಫ್ರೆಂಡ್​! 20ರ ಯುವತಿಯೊಂದಿಗೆ 40ರ ಡ್ರೈವರ್​ ರಿಲೇಷನ್​ಶಿಪ್​!

Murder_571_855
Published on

ನವದೆಹಲಿ: ಗಂಡ ಒಂದು ಊರಿನಲ್ಲಿ ಹೆಂಡತಿ ಇನ್ನೊಂದು ಊರಿನಲ್ಲಿ ಇರುವುದು ಸಂಸಾರಕ್ಕೆ ನಾವೇ ಇಟ್ಟುಕೊಳ್ಳುವ ಕೊಳ್ಳಿ ಎನ್ನುತ್ತಾರೆ. ಅದೇ ರೀತಿ ಒಂದು ರಾಜ್ಯದಲ್ಲಿ ಹೆಂಡತಿ, ಮಕ್ಕಳನ್ನು ಬಿಟ್ಟು, ಇನ್ನೊಂದು ರಾಜ್ಯದಲ್ಲಿ ತಾನು ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಇದೀಗ ಜೈಲು ಪಾಲಾಗುವಂತಾಗಿದೆ.


ಮುಕೇಶ್​ ಪವಾನ್​ (4) ಹೆಸರಿನ ವ್ಯಕ್ತಿ ಮೂಲತಃ ಬಿಹಾರದವನು. ಅವನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಹೆಂಡತಿ ಮಕ್ಕಳು ಬಿಹಾರದ ದರ್ಭಂಗದಲ್ಲಿ ವಾಸವಿದ್ದಾರೆ. ಆದರೆ ದುಡಿಮೆಯ ಬೆನ್ನು ಹತ್ತಿದ ಮುಕೇಶ್​ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೆಲೆಸಿದ್ದ. ಕಾರೊಂದನ್ನು ಇಟ್ಟುಕೊಂಡಿದ್ದು, ಅದರದ್ದೇ ಬಾಡಿಗೆ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ ಅವನಿಗೆ ರೇಷ್ಮಾ (20) ಹೆಸರಿನ ಯುವತಿಯೊಂದಿಗೆ ಪ್ರೀತಿ ಹುಟ್ಟಿದ್ದು, ಕಳೆದ ಎರಡು ವರ್ಷಗಳಿಂದ ಆಕೆಯೊಂದಿಗೆ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದ. ದೆಹಲಿಯಲ್ಲಿ ಸುಭಾಷ್ ಪ್ಲೇಸ್ ಪ್ರದೇಶದಲ್ಲಿ ಇಬ್ಬರು ಒಟ್ಟಿಗೆ ಸಂಸಾರ ನಡೆಸುತ್ತಿದ್ದರು.


ಶುಕ್ರವಾರ ಮಧ್ಯ ರಾತ್ರಿ 1.30ರ ಸಮಯಕ್ಕೆ ಸುಭಾಷ್ ಪ್ಲೇಸ್ ಪೊಲೀಸ್​ ಠಾಣೆಗೆ ಒಂದು ಕರೆ ಬಂದಿದೆ. ಯುವತಿಯೊಬ್ಬಳು ನಾಲ್ಕನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾಳೆ ಎಂದು ಮಾಹಿತಿ ನೀಡಲಾಗಿದೆ. ತಕ್ಷಣ ಸ್ಥಳಕ್ಕೆ ಹೋದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವಳು ಅದಾಗಲೇ ಕೊನೆಯುಸಿರೆಳಿದಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಈ ರೀತಿ ಸಾವಿಗೀಡಾಗಿದ್ದು, ಬೇರಿನ್ನಾರೂ ಅಲ್ಲ, ಮುಕೇಶ್​ನ ಗರ್ಲ್​ಫ್ರೆಂಡ್​ ರೇಷ್ಮಾ.


ಘಟನಾ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದ ಸಿಸಿಟಿವಿ ಪರಿಶೀಲಿಸಿದ್ದಾರೆ. ಆಗ ಅದರಲ್ಲಿ ಮುಕೇಶ್​ ಕಾಣಿಸಿಕೊಂಡಿದ್ದಾನೆ. ಆತನೇ ರೇಷ್ಮಾಳನ್ನು ಎತ್ತಿ ಕೆಳಗೆ ಹಾಕಿರುವುದು ಕಂಡುಬಂದಿದೆ. ತಕ್ಷಣ ಕಾರ್ಯಚಕಿತರಾದ ಪೊಲೀಸರು ಮುಕೇಶ್​ಗೆ ಬಲೆ ಬೀಸಿದ್ದಾರೆ. ಅದಾಗಲೇ ದೆಹಲಿಯಿಂದ ಬಿಹಾರಕ್ಕೆ ಹೊರಟಿದ್ದ ಆತನನ್ನು ಉತ್ತರ ಪ್ರದೇಶದ ಲಖನೌನಲ್ಲಿ ಬಂಧಿಸಲಾಗಿದೆ. ಯಾವುದೋ ಒಂದು ಜಗಳದಿಂದ ಸಿಟ್ಟಾಗಿ ಈ ರೀತಿ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ರೇಷ್ಮಾಳ ಮೃತದೇಹವನ್ನು ಸುಟ್ಟು ಹಾಕಲು ಪ್ರಯತ್ನಿಸಿದೆ, ಆದರೆ ಅಕ್ಕ ಪಕ್ಕದ ಬಿಲ್ಡಿಂಗ್​ನಲ್ಲಿ ಕೆಲವರು ಎಚ್ಚರ ಇದ್ದಾರೆನ್ನುವುದು ಗೊತ್ತಾದ ಹಿನ್ನೆಲೆಯಲ್ಲಿ ಹಾಗೇ ಬಿಟ್ಟು ಓಡಿ ಬಂದೆ ಎಂದು ಆತ ತಿಳಿಸಿದ್ದಾನೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net