

ನವದೆಹಲಿ: ಗಮ್ಯವನ್ನು ಬೇಗ ತಲುಪಬೇಕು ಎಂಬ ಪ್ರಯಾಣಿಕರಿಗೆ ಹಾಗೂ ಅತಿಹೆಚ್ಚು ಪ್ರಯಾಣಿಕರ ಒತ್ತಡ ಇರುವ ಮಾರ್ಗಗಳಲ್ಲಿ ಕ್ಷಿಪ್ರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡುವ ಸಲುವಾಗಿ ಭಾರತೀಯ ರೈಲ್ವೇ ಸೋಮವಾರ 40 ತದ್ರೂಪಿ (ಕ್ಲೋನ್) ರೈಲುಗಳನ್ನು ಹಳಿಗಿಳಿಸಿದೆ.
ಈ ಕ್ಲೋನ್ ಟ್ರೇನ್ಗಳು 3-AC ರೈಲುಗಳಾಗಿದ್ದು, ಪೇರೆಂಟ್ ಟ್ರೇನ್ಗಿಂತ ಕಡಿಮೆ ನಿಲುಗಡೆ, ಹೆಚ್ಚು ವೇಗ ಹೊಂದಿರಲಿದ್ದು, ಪೇರೆಂಟ್ ಟ್ರೇನ್ಗಿಂತ ಮೊದಲೇ ಹೊರಡಲಿವೆ. ಪರಿಣಾಮ, ಪ್ರಯಾಣಿಕರು ಮೂಲ ರೈಲಿಗಿಂತ 2-3 ಗಂಟೆ ಮೊದಲೇ ಗಮ್ಯವನ್ನು ತಲುಪಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ದೆಹಲಿ, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶಗಳ ಅತಿಹೆಚ್ಚಿನ ಬೇಡಿಕೆಯ ಮಾರ್ಗಗಳಲ್ಲಿ ಈ ಕ್ಲೋನ್ ಟ್ರೇನ್ಗಳನ್ನು ಬಿಡಲಾಗಿದೆ. ಈ ರೈಲುಗಳಿಗೆ 10 ದಿನಗಳ ಮೊದಲು ರಿಸರ್ವೇಷನ್ ಮಾಡಬಹುದಾಗಿದ್ದು, ಸೆ. 19ರ ಬೆಳಗ್ಗೆ 8ರಿಂದಲೇ ಬುಕಿಂಗ್ ಆರಂಭಗೊಂಡಿದೆ. (ಏಜೆನ್ಸೀಸ್)