

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕೈಗೊಂಡಿದ್ದ ಅಭಿಯಾನದಡಿ ಜಿಲ್ಲೆಯಲ್ಲಿ 3,048 ಶಂಕಿತ ಪ್ರಕರಣಗಳ ಪರೀಕ್ಷೆಯ ಬಳಿಕ 4 ಕುಷ್ಠ ರೋಗಿಗಳು ಪತ್ತೆಯಾಗಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಳೆದ ಜು.29 ರಿಂದ ಆ.14 ರವರೆಗೆ ಆಂದೋಲನ ಕೈಗೊಂಡಿದ್ದು, ಇದರ ಅವಧಿಯಲ್ಲಿ 2,91,175 ಮನೆಗಳ ಸಮೀಕ್ಷೆ ನಡೆಸಲಾಗಿದೆ. 12,99,503 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ತಾಲೂಕು ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಹಾಗೂ ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಉಸ್ತುವಾರಿಯಲ್ಲಿ ಜಿಲ್ಲಾದ್ಯಂತ 1,040 ತಂಡಗಳು ಮತ್ತು 104 ಮೇಲ್ವಿಚಾರಕರು ಅಭಿಯಾನದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ವಿಭಾಗದಿಂದ ಪ್ರತಿ ದಿನ ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಕ್ಷೇತ್ರ ಸಮೀಕ್ಷೆ ನಡೆಸಿ, ಮೊದಲು ಶಂಕಿತ ಪ್ರಕರಣ ಗುರುತಿಸಿದ್ದು, ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಂದ ದೃಢಪಡಿಸಿ, ರೋಗಿಗಳಿಗೆ ಚಿಕಿತ್ಸೆಗೆ ಕೊಡಿಸುವ ಕೆಲಸ ಮಾಡಿದ್ದಾರೆ. ಒಂದು ದಶಕದಲ್ಲಿ ಜಿಲ್ಲಾದ್ಯಂತ 786 ಕುಷ್ಠ ರೋಗ ಪ್ರಕರಣಗಳು ವರದಿಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 35 ರೋಗ ಪ್ರಕರಣಗಳು ಪತ್ತೆಯಾಗಿದೆ. ಇದರ ನಡುವೆ ಆಂದೋಲನದಲ್ಲಿ 4 ರೋಗಿಗಳಿಗೆ ಕುಷ್ಠ ರೋಗ ಇರುವುದು ದೃಢಪಟ್ಟಿದೆ.
ಎಂಡಿಟಿ ಚಿಕಿತ್ಸೆ
ಜಿಲ್ಲೆಯಲ್ಲಿ 3048 ಶಂಕಿತ ಪ್ರಕರಣಗಳ ಪರೀಕ್ಷೆಯ ಬಳಿಕ 4 ಕುಷ್ಠರೋಗಿಗಳು ಪತ್ತೆಯಾಗಿದ್ದಾರೆ. ಈ ಪೈಕಿ ಬಾಗೇಪಲ್ಲಿ ತಾಲೂಕಿನಲ್ಲಿ 1 ಪಿಬಿ ಮತ್ತು 1 ಎಂಬಿ, ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ತಲಾ 1 ಎಂಬಿ ಪ್ರಕರಣ ವರದಿಯಾಗಿದ್ದು, ಈ ಪ್ರಕರಣಗಳಿಗೆ ಎಂಡಿಟಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುವಾರ್ ತಿಳಿಸಿದ್ದಾರೆ.
ಕುಷ್ಠ ರೋಗ ವಾಸಿಯಾಗುತ್ತದೆ. ಇದಕ್ಕೆ ತ್ವರಿತ ಪತ್ತೆ ಮತ್ತು ಚಿಕಿತ್ಸೆ ಅಗತ್ಯ. ಒಂದು ವೇಳೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರ ಬಳಿ ತಪಾಸಣೆಗೊಳಗಾಬೇಕು. ಹೆಚ್ಚಿನ ವಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಇಲ್ಲವೇ ಸಹಾಯವಾಣಿ ಸಂಖ್ಯೆ:104 ಕ್ಕೆ ಕರೆ ವಾಡಿ ವಾಹಿತಿ ಪಡೆಯಬಹುದು..
ಡಾ.ಮಹೇಶ್ ಕುವಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ,