ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ಕಿರುಕುಳ; ನಾಲ್ವರು ಪೊಲೀಸ್​ ಅಧಿಕಾರಿಗಳು ಅರೆಸ್ಟ್

harassment
Published on

ಚೆನ್ನೈ: ಅಪ್ರಾಪ್ತ ವಯಸ್ಕಳೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ಪೊಲೀಸ್​ ಅಧಿಕಾರಿಗಳನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿರುವ ಘಟನೆ ತಮಿಳುನಾಡಿನ ತಿರುಚಿ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣ ಸಂಬಂಧ ನಾಲ್ವರು ಪೊಲೀಸ್​ ಅಧಿಕಾರಿಗಳನ್ನ ಕರ್ತವ್ಯದಿಂದ ಅಮಾನತು ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತಿರುಚಿ ಉಪ ಪೊಲೀಸ್ ಮಹಾನಿರೀಕ್ಷಕರಾದ ಪಿ ಪಕಲವನ್, ಬಂಧಿತ ನಾಲ್ವರು ಆರೋಪಿಗಳು ಮದ್ಯಪಾನ ಸೇವಿಸಲು ಉದ್ಯಾನವನ ಒಂದಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲಿ ಅಪ್ರಾಪ್ತ ವಯಸ್ಕಳು ಹಾಗೂ ಆಕೆಯ ಸ್ನೇಹಿತ ಇರುವುದನ್ನು ಗಮನಿಸಿದ ಆರೋಪಿಗಳು, ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಬೇರೊಂದು ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಬಳಿಕ ನಾಲ್ವರು ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಕೃತ್ಯವನ್ನು ತಮ್ಮ ಮೊಬೈಲ್​ ಫೋನಿನಲ್ಲಿ ಚಿತ್ರೀಕರಿಸಿ ನಡೆದ ವಿಚಾರವನ್ನು ಹೊರಗಡೆ ಬಾಯ್ಬಿಟ್ಟರೆ ಗಾಂಜಾ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ಪರಾರಿಯಾಗಿದ್ದಾರೆ. ಕೂಡಲೇ ಎಚ್ಚೆತ್ತ ಸಂತ್ರಸ್ತೆ ಹತ್ತಿರದಲ್ಲಿದ್ದ ಪೊಲೀಸ್​ ಠಾಣೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿ ದೂರು ದಾಖಲಿಸಿದ್ದಾಳೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ವರದಿ ಮೂಲಕ ತಿಳಿದು ಬಂದಿದೆ. ಪ್ರಕರಣದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ನಾಲ್ವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿರುಚಿ ಉಪ ಪೊಲೀಸ್ ಮಹಾನಿರೀಕ್ಷಕರಾದ ಪಿ ಪಕಲವನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net