

Heavy Rain In Nepal: ನೇಪಾಳದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಅನೇಕ ಸೇತುವೆಗಳು ಜಲಾವೃತಗೊಂಡಿವೆ, ಸುಮಾರು 39 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೇಪಾಳದ ಪೂರ್ವ ಪರ್ವತ ಜಿಲ್ಲೆಯಾದ ಇಲ್ಲಮ್‌ನಲ್ಲಿ ಭಾನುವಾರ ಸಂಭವಿಸಿದ ಭೂಕುಸಿತದಿಂದ ಹಲವಾರು ಗ್ರಾಮಗಳು ಜಲಾವೃತವಾಗಿವೆ, ಕನಿಷ್ಠ 18 ಜನರು ಮೃತರಾಗಿದ್ದು, ಏಳು ಜನರು ಕಾಣೆಯಾಗಿದ್ದಾರೆ ಎಂದು ನೇಪಾಳ ಪೊಲೀಸ್ ವಕ್ತಾರ ಬಿನೋದ್ ಘಿಮಿರೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕಠ್ಮಂಡು ಕಣಿವೆಯನ್ನು ದೇಶದ ಬೇರೆ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಪ್ರವಾಹದಿಂದ ಮುಚ್ಚಿಹೋಗಿದ್ದು, ಅನೇಕ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಭೂಕುಸಿತ ಸಂಭವಿಸುವ ಪ್ರದೇಶಗಳಿಗೆ ಪ್ರಯಾಣಿಸದಂತೆ ಮತ್ತು ಪರ್ಯಾಯ ಮಾರ್ಗಗಳನ್ನು ಬಳಸುವಂತೆ, ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕೆಂದು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಸನ್ಸಾರಿ ಜಿಲ್ಲೆಯ ಜಿಲ್ಲಾ ಗವರ್ನರ್ ಧರ್ಮೇಂದ್ರ ಕುಮಾರ್ ಮಿಶ್ರಾ ಮಾತನಾಡಿ, ಕೋಶಿ ಬ್ಯಾರೇಜ್‌ನ ಎಲ್ಲಾ 56 ಸ್ಲೂಯಿಸ್ ಗೇಟ್‌ಗಳನ್ನು ನೀರನ್ನು ಹೊರಹಾಕಲು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ದೇಶೀಯ ವಿಮಾನಗಳು ಹೆಚ್ಚಾಗಿ ಅಸ್ತವ್ಯಸ್ತಗೊಂಡಿವೆ ಆದರೆ ಅಂತರರಾಷ್ಟ್ರೀಯ ವಿಮಾನಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಕಠ್ಮಂಡು ವಿಮಾನ ನಿಲ್ದಾಣದ ವಕ್ತಾರ ರಿಂಜಿ ಶೆರ್ಪಾ ರಾಯಿಟರ್ಸ್‌ಗೆ ತಿಳಿಸಿದರು.
ನೇಪಾಳದ ಪ್ರಧಾನ ಪರ್ವತ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಆಗಾಗ್ಗೆ ಸಂಭವಿಸುವ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳಲ್ಲಿ ಪ್ರತಿ ವರ್ಷ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ 224 ಜನರು ಸಾವನ್ನಪ್ಪಿ, 158 ಜನರು ಗಾಯಗೊಂಡಿದ್ದರು. ವಾರಾಂತ್ಯದ ಭಾರೀ ಮಳೆಯು ನೇಪಾಳದ ಮಾನ್ಸೂನ್ ಋತುವಿನ ಕೊನೆಯಲ್ಲಿ ಬಂದಿತು, ಇದು ಸಾಮಾನ್ಯವಾಗಿ ಜೂನ್‌ನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಕೊನೆಗೊಳ್ಳುತ್ತದೆ.(ಏಜೆನ್ಸೀಸ್)