

ಮಂಗಳೂರು: ಮಾದಕ ಜಾಲ ನೆಪದಲ್ಲಿ ನಗರದ ನಿವಾಸಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತರು ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ಎಂದು ನಂಬಿಸಿ 35ಲಕ್ಷ ರೂ. ವಂಚಿಸಿದ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ವಿವರ: ಸೆ.24ರಂದು ದೂರುದಾರರಿಗೆ ಮುಂಬಯಿ ಕೊರಿಯರ್ ಸರ್ವೀಸ್ ಸೆಂಟರ್‌ನಿಂದ ಕಾರ್ತಿಕ್ ಶರ್ಮಾ ಎಂದು ಪರಿಚಯಿಸಿಕೊಂಡಾತ ಕರೆ ಮಾಡಿದ್ದಾನೆ. ನಿಮ್ಮ ಹೆಸರಿನಲ್ಲಿ ಮುಂಬಯಿಯಿಂದ ತೈವಾನ್‌ಗೆ ಕಾನೂನು ಬಾಹಿರ ಹಾಗೂ ಮಾದಕ ವಸ್ತುಗಳಿರುವ ಕೊರಿಯರ್ ಸಾಗಾಟವಾಗುತ್ತಿದ್ದು, ಇದನ್ನು ಮುಂಬಯಿ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ನೀವು ಸೈಬರ್ ಕ್ರೈಂ ಅಧಿಕಾರಿಗಳೊಂದಿಗೆ ಮಾತನಾಡಬೇಕೆಂದು ತಿಳಿಸಿ ನಂಬರ್ ನೀಡಿರುತ್ತಾರೆ.
ದೂರುದಾರರು ಆ ನಂಬರ್ ಗೆ ಕರೆ ಮಾಡಿದಾಗ ಸೈಬರ್ ಅಧಿಕಾರಿ ಪ್ರಾಣೇಶ್ ಗುಪ್ತಾ ಎಂದು ಪರಿಚಯಿಸಿಕೊಂಡು ವಿಡಿಯೋ ಕಾಲ್ ಮೂಲಕ ದೂರುದಾರರಲ್ಲಿ ಮಾತನಾಡಿದ್ದಾನೆ. ಅಂತಾರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ನಿಮ್ಮ ಹೆಸರು ನಮೂದಿಸಿದ್ದು ನಿಮ್ಮನ್ನು ಬಂಧಿಸಲಾಗುವುದು. ಪ್ರಕರಣದಿಂದ ಮುಕ್ತಗೊಳಿಸಲು ಆರೋಪಿಗಳು ಹಣದ ಬೇಡಿಕೆಯಿಟ್ಟರು. ಇದರಿಂದ ಆತಂಕಿತರಾದ ಅವರು ಹಂತಹಂತವಾಗಿ ಬ್ಯಾಂಕ್ ಖಾತೆಯಿಂದ 35 ಲಕ್ಷ ರೂ. ವರ್ಗಾಯಿಸಿದ್ದಾರೆ. ಬಳಿಕ ಮೋಸ ಹೋಗಿರುವುದಾಗಿ ಗೊತ್ತಾಗಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.