ತೆಲಂಗಾಣದಲ್ಲಿ ಸುರಂಗ ಕುಸಿತ; 6 ಕಾರ್ಮಿಕರು ಸಿಲುಕಿರುವ ಶಂಕೆ.. ಮುಂದುವರಿದ ರಕ್ಷಣಾ ಕಾರ್ಯಾಚರಣೆ | Telangana

Untitled design (13)
Published on

ಹೈದರಾಬಾದ್​​: ತೆಲಂಗಾಣದ(Telangana) ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಶನಿವಾರ(ಫೆಬ್ರವರಿ 22) ಛಾವಣಿಯ ಒಂದು ಭಾಗ ಕುಸಿದು ಕನಿಷ್ಠ ಆರು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಮಾಣ ಕಂಪನಿಯ ತಂಡವು ಮೌಲ್ಯಮಾಪನಕ್ಕಾಗಿ ಒಳಗೆ ಹೋಗಿದ್ದು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು. ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಆರರಿಂದ ಎಂಟು ಕಾರ್ಮಿಕರು ಸಿಕ್ಕಿಹಾಕಿಕೊಂಡಿರುವ ಶಂಕೆ ಇದೆ. ಕೆಲವು ಕಾರ್ಮಿಕರು ಕೆಲಸದ ಭಾಗವಾಗಿ 12-13 ಕಿ.ಮೀ. ಒಳಗೆ ಹೋದಾಗ ಸುರಂಗದೊಳಗೆ ಮೇಲ್ಛಾವಣಿ ಕುಸಿದು ಈ ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಅಧಿಕಾರಿಗಳಿಗೆ ಅಪಘಾತದ ಸ್ಥಳಕ್ಕೆ ತಲುಪಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯಿಂದ ಬಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಪಘಾತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಕಲ್ಲಿದ್ದಲು ಸಚಿವ ಜಿ. ಕಿಶನ್ ರೆಡ್ಡಿ ಅವರು ಅಪಘಾತದಲ್ಲಿ ಸಿಲುಕಿರುವ ಶಂಕಿತರನ್ನು ಸುರಕ್ಷಿತವಾಗಿ ಹೊರತರುವಂತೆ ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರ ಕಚೇರಿಯ ಮೂಲಗಳು ತಿಳಿಸಿವೆ

ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ವಿವರಗಳನ್ನು ಘೋಷಿಸಲಾಗಿದೆ. ಜಾರ್ವಿ ಸಿಂಗ್ (ಪಂಜಾಬ್), ಸನ್ನಿ ಸಿಂಗ್ (ಜಮ್ಮು ಮತ್ತು ಕಾಶ್ಮೀರ), ಮನೋಜ್ ದೋಬೆ (ಯುಪಿ), ಶ್ರೀನಿವಾಸುಲು, ಸಂದೀಪ್ ಮತ್ತು ಸಂತೋಷ್ ಜಟ್ಕಾ ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಶ್ರೀಶೈಲಂ ಎಡದಂಡೆ ಕಾಲುವೆ (SLBC) ಸುರಂಗ ಯೋಜನೆಯನ್ನು ನಲ್ಗೊಂಡ ಜಿಲ್ಲೆಗೆ ನೀರಾವರಿ ಮತ್ತು ಕುಡಿಯುವ ನೀರನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಅಂದಿನ ಸರ್ಕಾರ 2005 ರಲ್ಲಿ ಯೋಜನೆಯ ಕೆಲಸವನ್ನು ಪ್ರಾರಂಭಿಸಿತು. 60 ತಿಂಗಳೊಳಗೆ ಕೆಲಸ ಪೂರ್ಣಗೊಳಿಸಲು ನಿರ್ಧರಿಸಲಾಯಿತು. ಈ ಯೋಜನೆಯ ಉದ್ದೇಶ ಶ್ರೀಶೈಲಂನಿಂದ ನಲ್ಗೊಂಡ ಜಿಲ್ಲೆಗೆ 30 ಟಿಎಂಸಿ ಕೃಷ್ಣಾ ನೀರನ್ನು ವರ್ಗಾಯಿಸುವುದು. ಆದಾಗ್ಯೂ, ಸುರಂಗ ಕೊರೆಯುವ ಯಂತ್ರವನ್ನು ಬಳಸಿ ಸುರಂಗವನ್ನು ಅಗೆಯುತ್ತಿದ್ದಾಗ, ತಾಂತ್ರಿಕ ಸಮಸ್ಯೆಗಳು ಮತ್ತು ಪ್ರವಾಹದಿಂದಾಗಿ ಕೆಲಸ ಸ್ಥಗಿತಗೊಂಡಿತ್ತು. ಇತ್ತೀಚೆಗಷ್ಟೆ ಮತ್ತೆ ಕೆಲಸವನ್ನು ಆರಂಭಿಸಲಾಗಿತ್ತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net