ಉ.ಪ್ರ.ದಲ್ಲಿ 30 ಕನ್ನಡಿಗರು ಅತಂತ್ರ; ಟ್ರಾವೆಲ್ ಏಜೆನ್ಸಿ ಮೂಲಕ ಪ್ರವಾಸ ಹೋಗಿದ್ದರು

page 10 3
Published on

ಬೆಂಗಳೂರು: ಇಲ್ಲಿ ಸಿಲುಕಿಕೊಂಡು 42 ದಿನಗಳಾದವು. ರಾಷ್ಟ್ರೀಯ ಸ್ವಯಂಸೇವಕರು (ಆರ್​ಎಸ್​ಎಸ್) ಗ್ಯಾಸ್, ಅಕ್ಕಿ, ತೊಗರಿಬೇಳೆ ಸೇರಿ ಇನ್ನಿತರ ಪದಾರ್ಥಗಳನ್ನು ಕೊಟ್ಟಿದ್ದಾರೆ. ಈವರೆಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಹಿರಿಯರ ಆರೋಗ್ಯದ ಬಗ್ಗೆ ಆತಂಕ ಶುರುವಾಗಿದೆ.

ಉತ್ತರಪ್ರದೇಶಕ್ಕೆ ಧಾರ್ವಿುಕ ಪ್ರವಾಸಕ್ಕೆ ಹೋಗಿ ಅಲ್ಲೇ ಸಿಲುಕಿ ಕೊಂಡಿರುವ ಸಿಲಿಕಾನ್ ಸಿಟಿ ನಿವಾಸಿಗಳ ಮಾತುಗಳಿವು. ನಗರದ ಟ್ರಾವೆಲ್ಸ್ ಏಜೆನ್ಸಿ ಮೂಲಕ ಮಾ.16 ರಂದು ಬೆಂಗಳೂರಿಂದ ಪಾಟಲಿಪುತ್ರ ರೈಲಿನಲ್ಲಿ ರಾಜಾಜಿನಗರ ನಿವಾಸಿ ಗೀತಾ ನೇತೃತ್ವದ 30 ಜನರ ತಂಡ ಕಾಶಿ, ಗಯಾ, ಅಲಹಾಬಾದ್ ಹಾಗೂ ಚಿತ್ರಕೂಟಕ್ಕೆ ಪಯಾಣ ಬೆಳೆಸಿತ್ತು. ಬೆಂಗಳೂರಿನಿಂದ ಹೊರಟು ಮಾ.18ಕ್ಕೆ ಪ್ರಯಾಗರಾಜ್​ಗೆ ತೆರಳಿತ್ತು.

ಟ್ರಾವೆಲ್ ಏಜೆನ್ಸಿಯವರು ಮಾಡಿರುವ ಬಸ್​ನಲ್ಲಿ ಮೊದಲಿಗೆ ಪ್ರಯಾಗ್ರಾಜ್ ವೀಕ್ಷಿಸಿ ಚಿತ್ರಕೂಟಕ್ಕೆ ತೆರಳುವ ವೇಳೆಗೆ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್​ಡೌನ್ ಎಂದು ಘೋಷಿಸಿತ್ತು. ಇದರಿಂದ ಪ್ರವಾಸಿಗರೂ ಸಂಕಷ್ಟದಲ್ಲಿ ಸಿಲುಕುವಂತಾಗಿದೆ.

ರಾಜ್ಯ ಸರ್ಕಾರಕ್ಕೆ ಮನವಿ: ಲಾಕ್​ಡೌನ್ ಪರಿಣಾಮದಿಂದ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವವರನ್ನು ಕರೆತರಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕ ಸರ್ಕಾರ ಕೂಡ ಹೊರರಾಜ್ಯಗಳಲ್ಲಿ ಸಿಲುಕಿರುವ ಕಾರ್ವಿುಕರು ಹಾಗೂ ಪ್ರವಾಸಿಗರನ್ನು ವಾಪಸ್ ಕರೆತರಲು ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಉತ್ತರ ಪ್ರದೇಶ ಸರ್ಕಾರದ ಜತೆ ಸಂವಹನ ನಡೆಸಿ ನಮ್ಮನ್ನು ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಪ್ರವಾಸಿಗರು ಕೋರಿದ್ದಾರೆ.

ಟಿಕೆಟ್ ರದ್ದು ಆಯ್ತು: ‘ವಿಜಯವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಗೀತಾ, ಲಾಕ್​ಡೌನ್ ಘೋಷಿಸಿದ ಕೂಡಲೇ ಸ್ವಲ್ಪ ಗಾಬರಿಯಾಯಿತು. ಬಳಿಕ ಧೈರ್ಯ ತುಂಬಿದ ಏಜೆನ್ಸಿಯವರು ಪುನಃ ಪ್ರಯಾಗ್​ರಾಜ್​ಗೆ ಕರೆದುಕೊಂಡು ಬಂದು ಜಂಗಮವಾಡಿ ಮಠದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಮಾ. 22ಕ್ಕೆ ವಾಪಸ್ಸಾಗಲು (ಲಾಕ್​ಡೌನ್​ಗೂ ಮುನ್ನ) ರೈಲು ಟಿಕೆಟ್ ಕಾಯ್ದಿರಿಸಲಾಗಿತ್ತು. ಆದರೆ, ಅದು ರದ್ದಾಯಿತು. ಒಟ್ಟು 44 ಮಂದಿ ಪ್ರವಾಸಕ್ಕೆ ಬಂದಿದ್ದೆವು. 14 ಜನ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ನಾವು ಸಹ ವಿಮಾನ ಟಿಕೆಟ್ ಬುಕ್ ಮಾಡಿದ್ದೆವು. ಆದರೆ, ಲಾಕ್​ಡೌನ್​ನಿಂದ ರದ್ದಾದವು. ಸದ್ಯ 30 ಜನ ಇದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net