ದೇಶದಲ್ಲಿ 3 ಕೆಮ್ಮಿನ ಸಿರಪ್‌ಗಳ ನಿಷೇಧ; ಪೋಷಕರು ಗಮನಿಸಬೇಕಾದ ಅಂಶವೇನು ಗೊತ್ತಾ|coughsyrup

coughsyrup
Published on

coughsyrup; ಕಳೆದ ತಿಂಗಳಲ್ಲಿ ಕನಿಷ್ಠ 17 ಮಕ್ಕಳ ಸಾವಿನ ಬಳಿಕ ಭಾರತವು ಮೂರು ಕೆಮ್ಮಿನ ಸಿರಪ್‌ಗಳನ್ನು ವಿಷಕಾರಿ ಎಂದು ಘೋಷಿಸಿದೆ. ಇವೆಲ್ಲವೂ ಕೋಲ್ಡ್ರಿಫ್ ಎಂಬ ಒಂದೇ ಬ್ರಾಂಡ್‌ಗೆ ಸಂಬಂಧಿಸಿದ್ದಾಗಿದ್ದು, ಔಷಧ ನಿಯಂತ್ರಕರು ಕೋಲ್ಡ್ರಿಫ್, ರೆಸ್ಪಿಫ್ರೆಶ್‌ಟಿಆರ್ ಮತ್ತು ರೀಲೈಫ್ ಎಂಬ ಮೂರು ಸಿರಪ್‌ಗಳನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ. ಇವುಗಳಲ್ಲಿ ಹೆಚ್ಚಿನ ಮಟ್ಟದ ಡೈಥಿಲೀನ್ ಗ್ಲೈಕಾಲ್ (DEG) ಎಂಬ ವಿಷಕಾರಿ ವಸ್ತು ಇರುವುದಾಗಿ ತಿಳಿದು ಬಂದಿದೆ.

ಪ್ರಾಥಮಿಕ ತನಿಖೆ ಪ್ರಕಾರ ಕೆಮ್ಮಿನ ಸಿರಪ್ ಅನ್ನು ಮಧ್ಯಪ್ರದೇಶ, ಒಡಿಶಾ ಮತ್ತು ಪುದುಚೇರಿಗೂ ಸಹ ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ 26 ಪುಟಗಳ ವರದಿಯು ಕಾನ್ಸೀಪುರದ ಔಷಧ ಕಾರ್ಖಾನೆಯಲ್ಲಿ ಕೆಮ್ಮಿನ ಸಿರಪ್ ಅನ್ನು ಅನೈರ್ಮಲ್ಯ ಸ್ಥಿತಿಯಲ್ಲಿ ತಯಾರಿಸಲಾಗಿದೆ ಎಂಬುದನ್ನು ಬಯಲು ಮಾಡಿದೆ. ರಾಜ್ಯ ನಿಯಂತ್ರಣ ಸಂಸ್ಥೆ ಗುರುತಿಸಿರುವ 350 ಉಲ್ಲಂಘನೆಗಳಲ್ಲಿ ತುಕ್ಕು ಹಿಡಿದ ಉಪಕರಣಗಳು ಮತ್ತು ಔಷಧೇತರ ರಾಸಾಯನಿಕಗಳ ಅಕ್ರಮ ಬಳಕೆಯೂ ಸೇರಿವೆ.

ಈ ಕೋಲ್ಡ್ರಿಫ್ ಅನ್ನು ತಮಿಳುನಾಡು ಮೂಲದ ಸ್ರೆಸನ್ ಫಾರ್ಮಾಸ್ಯುಟಿಕಲ್ ಎಂಬ ತಯಾರಕರು ತಯಾರಿಸಿದ್ದಾರೆ. ಪ್ರಯೋಗಾಲಯ ಪರೀಕ್ಷೆಗಳಲ್ಲಿ ಸಿರಪ್‌ನಲ್ಲಿ 48.6% ಡೈಥಿಲೀನ್ ಗ್ಲೈಕೋಲ್ ಇರುವುದು ಕಂಡುಬಂದಿದೆ. ಜೊತೆಗೆ ಗುಜರಾತ್‌ನಲ್ಲಿ ರೆಡ್ನೆಕ್ಸ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ರೆಸ್ಪಿಫ್ರೆಶ್​ಟಿಆರ್, 1.342% ಡಿಇಜಿಯಿಂದ ಕಲುಷಿತಗೊಂಡಿರುವುದಾಗಿ ತಿಳಿದು ಬಂದಿದೆ.

ಕೆಮ್ಮಿನ ಸಿರಪ್‌ಗಳಲ್ಲಿ ಕಂಡುಬರುವ ಐದು ಹಾನಿಕಾರಕ ಅಂಶ

ಕೆಮ್ಮನ್ನು ನಿಯಂತ್ರಿಸಲು ಕೊಡೈನ್ ಎಂಬ ಒಪಿಯಾಯ್ಡ್ ಔಷಧವನ್ನು ಬಳಸಲಾಗುತ್ತದೆ. ಇದು ಕೆಮ್ಮು ನಿಗ್ರಹಕ ಮತ್ತು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಇದು ಕೇಂದ್ರೀಯ ನರಮಂಡಲದ ಮೇಲೆ ಕಾರ್ಯನಿರ್ವಹಿಸಿ ಕೆಮ್ಮಿನ ಪ್ರತಿಫಲನವನ್ನು ಕಡಿಮೆ ಮಾಡುತ್ತದೆ. ಆದರೆ ಮಕ್ಕಳ ಕೆಮ್ಮಿನ ಚಿಕಿತ್ಸೆಗೆ ಕೊಡೈನ್ ಬಳಕೆಯ ಬಗ್ಗೆ ಕೆಲವು ಮಹತ್ವದ ಅಂಶಗಳನ್ನು ಪೋಷಕರು ತಿಳಿದಿರಬೇಕು. ಬಳಸುವ ಕೊಡೈನ್ ಎಂಬ ಒಪಿಯಾಯ್ಡ್ ಅನ್ನು ದುರುಪಯೋಗಪಡಿಸಿಕೊಂಡರೆ ವ್ಯಸನ ಮತ್ತು ಉಸಿರಾಟದ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಕೊಡೈನ್

ಡೆಕ್ಸ್ಟ್ರೋಮೆಥೋರ್ಫಾನ್ (DXM) ಸಾಮಾನ್ಯ ಕೆಮ್ಮು ನಿವಾರಕವಾಗಿದೆ. ಹಾಗಾಗಿ ಇದನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಸುರಕ್ಷಿತ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತುಂಬಾ ಅಪಾಯಕಾರಿಯಾಗಿದ್ದು, ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಮಿತಿಮೀರಿದ ಸೇವನೆಯು ಕೋಮಾ ಅಥವಾ ಗೊಂದಲಕ್ಕೂ ಕಾರಣವಾಗಲಿದೆಯಂತೆ.

ಡೆಕ್ಸ್ಟ್ರೋಮೆಥೋರ್ಫಾನ್

ಪ್ರೊಮೆಥಜಿನ್ ಒಂದು ನಿದ್ರಾಜನಕವಾಗಿದೆ. 2 ವರ್ಷದೊಳಗಿನ ಮಕ್ಕಳಲ್ಲಿ ಮಾರಕ ಉಸಿರಾಟದ ಖಿನ್ನತೆಯ ಅಪಾಯದಿಂದಾಗಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ FDA ಇದರ ಬಳಕೆಗೆ ಎಚ್ಚರಿಕೆಯನ್ನು ನೀಡಿದೆ. ಇದರ ಅತಿಯಾದ ಬಳಕೆಯು ಅರೆನಿದ್ರಾವಸ್ಥೆ, ನಿಧಾನ ಉಸಿರಾಟ ಮತ್ತು ಗೊಂದಲಕ್ಕೆ ಕಾರಣವಾಗಬಹುದು.

ಪ್ರೊಮೆಥಜಿನ್

ಡಿಫೆನ್‌ಹೈಡ್ರಾಮೈನ್ ಒಂದು ಔಷಧವಾಗಿದ್ದು, ಕೆಮ್ಮಿನ ಚಿಕಿತ್ಸೆಗೆ, ಅಲರ್ಜಿಗಳಿಗೆ, ಮತ್ತು ಇತರ ಲಕ್ಷಣಗಳಿಗೆ ಬಳಸಲಾಗುತ್ತದೆ. ಇದನ್ನು ಕೆಮ್ಮು ನಿಗ್ರಹಕವಾಗಿ ಮತ್ತು ನಿದ್ರೆಗೆ ಸಹಾಯಕವಾಗಿ ಆಗಾಗ ಬಳಸಲಾಗುತ್ತದೆ. ಆದರೆ, ಮಕ್ಕಳಿಗೆ ಇದರ ಬಳಕೆಯ ಬಗ್ಗೆ ಪೋಷಕರು ಕೆಲವು ಮಹತ್ವದ ಅಂಶಗಳನ್ನು ಗಮನಿಸಬೇಕು. 2 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಡಿಫೆನ್‌ಹೈಡ್ರಾಮೈನ್ ಶಿಫಾರಸು ಮಾಡಲಾಗುವುದಿಲ್ಲ, ಏಕೆಂದರೆ ಇದು ಶ್ವಾಸಕೋಶದ ತೊಂದರೆ ಅಥವಾ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. 2-6 ವರ್ಷದ ಮಕ್ಕಳಿಗೆ: ಕೇವಲ ವೈದ್ಯರ ಮೇಲ್ವಿಚಾರಣೆಯಲ್ಲಿ ಕಡಿಮೆ ಡೋಸ್‌ನಲ್ಲಿ ನೀಡಬಹುದು.

ಡಿಫೆನ್‌ಹೈಡ್ರಾಮೈನ್

ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ಡೈಥಿಲೀನ್ ಗ್ಲೈಕಾಲ್ (DEG) ಒಂದು ವಿಷಕಾರಿ ರಾಸಾಯನಿಕವಾಗಿದ್ದು, ಇದನ್ನು ಔಷಧೀಯ ಉತ್ಪನ್ನಗಳಲ್ಲಿ (ವಿಶೇಷವಾಗಿ ಕೆಮ್ಮು ಸಿರಪ್‌ಗಳಲ್ಲಿ) ಬಳಸುವುದು ಅಪಾಯಕಾರಿಯಾಗಿದೆ. DEG ಒಂದು ಬಣ್ಣರಹಿತ, ವಾಸನೆಯಿಲ್ಲದ, ಸಿಹಿಯಾದ ರುಚಿಯ ದ್ರವವಾಗಿದೆ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಕೆಲವೊಮ್ಮೆ ಔಷಧೀಯ ಉತ್ಪನ್ನಗಳಲ್ಲಿ ಗ್ಲಿಸರಿನ್ ಅಥವಾ ಪ್ರೊಪಿಲೀನ್ ಗ್ಲೈಕಾಲ್‌ಗೆಬದಲಿಯಾಗಿ ಬಳಸಲಾಗುತ್ತದೆ. DEG ದೇಹದಲ್ಲಿ ಕಿಡ್ನಿ ವೈಫಲ್ಯ, ಯಕೃತ್ತಿನ ಹಾನಿ, ಮತ್ತು ಕೇಂದ್ರೀಯ ನರಮಂಡಲದ ತೊಂದರೆಗೆ ಕಾರಣವಾಗಲಿದೆ.

ಡೈಥಿಲೀನ್ ಗ್ಲೈಕಾಲ್ (DEG)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net