

ಗುರುಪುರ: ಮೂಡುಶೆಡ್ಡೆಯ ಶಾರದಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಆಯೂಷ್ ಎ.ರೈ ಅವರು ಅ.25ರವರೆಗೆ ಉತ್ತರ ಪ್ರದೇಶದ ಗಾಝಿಯಾಬಾದ್‌ನ ಸ್ವಸ್ತಿಕ್ ವಿದ್ಯಾಮಂದಿರದ ನೆಹರುನಗರದಲ್ಲಿ ನಡೆದ 35ನೇ ರಾಷ್ಟ್ರೀಯ ಮಟ್ಟದ ಅಂಡರ್ 17 ವರ್ಷದ ಬಾಲಕರ ಬಿಲೋ 73 ಕಿಲೋ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸೆ.14ರಂದು ಗಾಜಿಯಾಬಾದ್‌ನಲ್ಲಿ ನಡೆದ ವಲಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಈತ ವಾಮಂಜೂರು ತಿರುವೈಲಿನ ಅಶೋಕ್ ರೈ ಮತ್ತು ಪ್ರತಿವಾ ರೈ ದಂಪತಿ ಪುತ್ರ. ಈತನ ಸಾಧನೆಗೆ ತರಬೇತುದಾರ ಎಡಪದವಿನ ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರೇಮನಾಥ ಶೆಟ್ಟಿ ಹಾಗೂ ಶಾರದಾ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.