PowerLifting ತರಬೇತಿ ವೇಳೆ ಅವಘಡ​; 270 ಕೆಜಿ ತೂಕದ ಬಾರ್​ ಬಿದ್ದು ಚಿನ್ನದ ಪದಕ ವಿಜೇತ ಅಥ್ಲೀಟ್ ಸಾವು

Yashtika Acharya
Published on

ಜೈಪುರ: ಪವರ್​ ಲಿಫ್ಟಿಂಗ್​ (PowerLifting) ಅಭ್ಯಾಸದ ವೇಳೆ 270 ಕೆಜಿ ತೂಕದ ಬಾರ್ ಕುತ್ತಿಗೆಯ ಮೇಲೆ​​ ಬಿದ್ದ ಪರಿಣಾಮ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಕ್ರೀಡಾಪಟು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬಿಕಾನೇರ್​ನಲ್ಲಿ ನಡೆದಿದೆ. 

ಮೃತರನ್ನು ಯಾಸ್ಥಿಕಾ ಆಚಾರ್ಯ (17) ಎಂದು ಗುರುತಿಸಲಾಗಿದೆ. ಇವರು ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು ಎಂದು ತಿಳಿದು ಬಂದಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಘಟನೆ ಕುರಿತು ಪ್ರತಿಕ್ರಿಯಿಸಿರುವ ನಯಾಶಹರ್ ಪೊಲೀಸ್​ ಠಾಣೆಯ ಎಸ್​ಎಚ್​ಒ ವಿಕ್ರಮ್ ತಿವಾರಿ, ಘಟನೆಯು ಮಂಗಳವಾರ (ಫೆಬ್ರವರಿ 19) ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದ್ದು, ಆಚಾರ್ಯ ಚೌಕ್ ಪ್ರದೇಶದ ಬಡಾ ಗಣೇಶ್ ಜಿ ದೇವಸ್ಥಾನದ ಬಳಿ ಇರುವ ಖಾಸಗಿ ಜಿಮ್​ನಲ್ಲಿ ಯಾಸ್ಥಿಕಾ ಪವರ್​ ಲಿಫ್ಟಿಂಗ್​ (PowerLifting) ಅಭ್ಯಾಸ​ ಮಾಡುತ್ತಿದ್ದರು.

ತರಬೇತುದಾರನ ಮೇಲ್ವಿಚಾರಣೆಯಲ್ಲಿ 270-ಕೆಜಿ ತೂಕದ ಸ್ಕ್ವಾಟ್ ಮಾಡಲು ಪ್ರಯತ್ನಿಸುತ್ತಿದ್ದಾಗ ಆಕೆ ಬ್ಯಾಲೆನ್ಸ್ ತಪ್ಪಿದ್ದು, 270 ಕೆಜಿ ತೂಕದ ಬಾರ್ ಆಕೆಯ ಕುತ್ತಿಗೆಯ ಮೇಲೆ ಬಿದ್ದು, ದುರ್ಘಟನೆ ಸಂಭವಿಸಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ಧಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ನಯಾಶಹರ್ ಪೊಲೀಸ್​ ಠಾಣೆಯ ಎಸ್​ಎಚ್​ಒ ವಿಕ್ರಮ್ ತಿವಾರಿ ತಿಳಿಸಿದ್ದಾರೆ. 

ಯಾಸ್ಥಿಕಾ ಆಚಾರ್ಯ ಪವರ್‌ಲಿಫ್ಟಿಂಗ್‌ನಲ್ಲಿ (PowerLifting) ಉದಯೋನ್ಮುಖ ತಾರೆಯಾಗಿದ್ದು, ಇತ್ತೀಚೆಗೆ ರಾಜಸ್ಥಾನ ರಾಜ್ಯ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ​​ಅಲ್ವಾರ್​ನಲ್ಲಿ ಆಯೋಜಿಸಿದ್ದ 29ನೇ ಸಬ್ ಜೂನಿಯರ್ ಮತ್ತು ಸೀನಿಯರ್ ಮೆನ್ ಮತ್ತು ವುಮೆನ್ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಗೋವಾದಲ್ಲಿ ನಡೆದ 33ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಕ್ಲಾಸಿಕ್ ವಿಭಾಗದಲ್ಲಿ ಬೆಳ್ಳಿ ಗೆದ್ದು ಗಮನ ಸೆಳೆದಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net