

ನವದೆಹಲಿ: ದೇಶದ ಸುಮಾರು 5,500 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥ ಸಿಹಿಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂಥದ್ದೊಂದು ನಿರ್ಧಾರವನ್ನು ಪ್ರಕಟಿಸಿದೆ.
ಹೊಸ ಆದೇಶದ ಪ್ರಕಾರ ಆಲ್ ಇಂಡಿಯಾ ಕೋಟಾದಡಿ ಇತರ ಹಿಂದುಳಿದ ವರ್ಗ(ಒಬಿಸಿ) ವಿದ್ಯಾರ್ಥಿಗಳಿಗೆ ಶೇ. 27, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್) ವಿದ್ಯಾರ್ಥಿಗಳಿಗೆ ಶೇ. 10 ಮೀಸಲಾತಿ ಸಿಗಲಿದೆ. ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ (ಎಂಬಿಬಿಎಸ್/ಎಂಡಿ/ಎಂಎಸ್/ಡಿಪ್ಲೊಮಾ/ಬಿಡಿಎಸ್/ಎಂಡಿಎಸ್) ವಿದ್ಯಾರ್ಥಿಗಳಿಗೆ 2021-22ರ ಸಾಲಿನಿಂದಲೇ ಇದು ಅನ್ವಯವಾಗಲಿದೆ.
ಬಹಳ ಕಾಲದಿಂದ ಬಾಕಿ ಉಳಿದಿದ್ದ ಈ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 26ರಂದು ಪ್ರಧಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತಳೆಯಲಾಗಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೀಸಲಾತಿ ಕೊಡುವ ಕುರಿತ ವಿಷಯ ಇದಾಗಿದೆ. ಈ ನಿರ್ಣಯದಿಂದ ಪ್ರತಿವರ್ಷ ಸುಮಾರು 5,500 ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.
2007ರಲ್ಲಿ ಸುಪ್ರೀಂಕೋರ್ಟ್ ಎಸ್ಸಿಗೆ ಶೇ15, ಎಸ್ಟಿಗೆ ಶೇ. 7.5 ಮೀಸಲಾತಿಯನ್ನು ಆಲ್ ಇಂಡಿಯಾ ಕೋಟಾದಡಿ ನೀಡಿತ್ತು. ಬಳಿಕ ಸೆಂಟ್ರಲ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ (ರಿಸರ್ವೇಷನ್ ಇನ್ ಅಡ್ಮಿಷನ್) ಆ್ಯಕ್ಟ್ನಲ್ಲಿ 2007ರಲ್ಲಿ ಒಬಿಸಿಗೆ ಶೇ. 27 ನೀಡಲಾಗಿದ್ದರೂ ಅದು ಕೆಲವು ಕಾಲೇಜುಗಳಿಗಷ್ಟೇ ಸೀಮಿತವಾಗಿದ್ದು, ಆಲ್ ಇಂಡಿಯಾ ಕೋಟಾದಡಿ ಬರುತ್ತಿರಲಿಲ್ಲ.
ಆದರೆ ಈಗಿನ ನಿರ್ಧಾರದಿಂದ ಪ್ರತಿವರ್ಷ ಸುಮಾರು 1500 ಒಬಿಸಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್, 2500 ಒಬಿಸಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮತ್ತು 550 ಇಡಬ್ಲ್ಯುಎಸ್ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಹಾಗೂ ಸುಮಾರು 1000 ಇಡಬ್ಲ್ಯುಎಸ್ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಮಾಡಲು ಅವಕಾಶ ಸಿಗಲಿದೆ. (ಏಜೆನ್ಸೀಸ್)