

ನವದೆಹಲಿ: 26/11 ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ ಸೋದರ ಮಾವ, ಲಷ್ಕರ್-ಎ-ತೊಯ್ಬಾ (LET) ಸಂಘಟನೆಯ ಉಪಮುಖ್ಯಸ್ಥ ಅಬ್ದುಲ್ ರೆಹಮಾನ್ ಮಕ್ಕಿ ಹೈದಯಾಘಾತದಿಂದ ಲಾಹೋರ್ನಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮಧುಮೇಹ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ ರೆಹಮಾನ್ ಮಕ್ಕಿ ಚಿಕಿತ್ಸೆಗೆಂದು ಲಾಹೋರ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಶುಕ್ರವಾರ (ಡಿಸೆಂಬರ್ 27) ಮುಂಜಾನೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಉಗ್ರ ಚಟುವಟಿಕೆಗಳಿಗೆ ಹಣಸಹಾಯ ಮಾಡುತ್ತಿದ್ದ ಆರೋಪದ ಮೇರೆಗೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು 2020ರಲ್ಲಿ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. 2023 ರಲ್ಲಿ ಮಕ್ಕಿಯನ್ನು ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ ಆತನ ಸ್ವತ್ತನ್ನು ಜಪ್ತಿ ಮಾಡಿ ಪ್ರಯಾಣ ನಿಷೇಧ ಹೇರಿತ್ತು.