ಬೆಂಗಳೂರು: ಜೀವನದಲ್ಲಿ ನೋಡಬೇಕಾದ ಶ್ರೇಷ್ಠ ಸ್ಥಳಗಳು, ಓದಬೇಕಾದ ಪುಸ್ತಕಗಳು, ತಿನ್ನಬೇಕಾದ ತಿನಿಸುಗಳು ಪಟ್ಟಿ ಮಾಡಿರುತ್ತೇವೆ. ಅಂತೆಯೇ ನೋಡಲೇಬೇಕಾದ ಭಾರತೀಯ ಶ್ರೇಷ್ಠ ಸಿನಿಮಾಗಳ ಪಟ್ಟಿಯನ್ನು ಬೆಳ್ಳಿತೆರೆ, ಕಿರುತೆರೆ, ಅಧಿಕೃತ ಶೋಗಳ ಡಿಜಿಟಲ್ ಮೂಲ ಎನಿಸಿಕೊಂಡಿರುವ ‘ಐಎಂಡಿಬಿ’ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ 250 ಚಿತ್ರಗಳಿವೆ. ಹಿಂದಿ, ಕನ್ನಡ, ಮಲಯಾಳಂ, ತೆಲುಗು ಸೇರಿ ವಿವಿಧ ಭಾಷೆಯ ಎಲ್ಲ ಚಿತ್ರಗಳಿವೆ.
ಟಾಪ್ 10ರ ಪಟ್ಟಿ: ಭಾರತೀಯ ಚಿತ್ರರಂಗದ ಶ್ರೇಷ್ಠ ಸಿನಿಮಾಗಳ ಪೈಕಿ ‘ಐಎಂಡಿಬಿ’ ಪಟ್ಟಿ ಮಾಡಿದ 250 ಸಿನಿಮಾಗಳಲ್ಲಿ ಟಾಪ್ ಹತ್ತರಲ್ಲಿ ವಿದು ವಿನೋದ್ ಚೋಪ್ರಾ ನಿರ್ದೇಶನ, ವಿಕ್ರಾಂತ್ ಮೆಸ್ಸಿ ನಟನೆಯ ‘12 ಫೇಲ್’ ಮೊದಲ ಸ್ಥಾನದಲ್ಲಿದೆ. ಅಮುಲ್ ಪಾಲೇಕರ್ ಅಭಿನಯದ ‘ಗೋಲ್‌ಮಾಲ್’ ದ್ವಿತೀಯ ಸ್ಥಾನ, ಕಮಲ್ ಹಾಸನ್ ಅವರ ‘ನಾಯಕನ್’ ತೃತಿಯ, ಸತ್ಯಜಿತ್ ರೇ ನಿರ್ದೇಶನದ ‘ಅಪುರ್ ಸಂಸಾರ್’ ನಾಲ್ಕನೇ ಸ್ಥಾನ, ‘ಅಂಬೆ ಶಿವಂ’ ಐದನೇ ಸ್ಥಾನದಲ್ಲಿದೆ. ನಂತರದ ಹತ್ತರರೊಳಗಿನ ಸ್ಥಾನದಲ್ಲಿ ‘ಪರಿಯುರಮ್ ಪರಿಮಾಳ್’ ‘3 ಇಡಿಯಟ್ಸ್ ’ ‘ಮಹಾರಾಜ’, ‘ಮಣಿಚಿತ್ರಥಲು’, ‘ಹೋಮ್’ಚಿತ್ರಗಳು ಸ್ಥಾನ ಪಡೆದಿವೆ. ಟಾಪ್ 20ರಲ್ಲಿ ‘ 777 ಚಾರ್ಲಿ’ ಸ್ಥಾನ ಪಡೆದುಕೊಂಡಿದೆ.
ಸ್ಥಾನ ಪಡೆದ ಕನ್ನಡ ಚಿತ್ರಗಳು: 250 ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಸಿನಿಮಾಗಳು ಇವೆ. 12ನೇ ಸ್ಥಾನದಲ್ಲಿ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ ’, ಪವನ್ ನಿರ್ದೇಶನದ ‘ಲೂಸಿಯಾ’ (139 ಸ್ಥಾನ), ಯಶ್ ನಟನೆಯ ‘ಕೆಜಿಎ್- ಚಾಪ್ಟರ್ 1’ (160), ರಕ್ಷಿತ್ ಶೆಟ್ಟಿಯ ‘ಸಪ್ತ ಸಾಗರಾಚೆ ಎಲ್ಲೋ-ಸೈಡ್ ಎ’ (165), ‘ಉಳಿದವರು ಕಂಡಂತೆ’ (175), ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ; (177), ‘ಕಿರಿಕ್ ಪಾರ್ಟಿ’ (198), ‘ಕೆಜಿಎ್- ಚಾಪ್ಟರ್ 2’ (205) ಸ್ಥಾನದಲ್ಲಿವೆ.
ಕನ್ನಡ ಖ್ಯಾತನಾಮರ ಹೆಸರಿಲ್ಲ: ಐಎಂಡಿಬಿ ಈ ಪಟ್ಟಿಯಲ್ಲಿ ಹಿಂದಿ ಸೇರಿ ಬೇರೆ ಭಾಷೆಗಳ 50, 60, 70, 80,90ರ ದಶಕದ ಸಿನಿಮಾಗಳಿವೆ. ಸತ್ಯಜಿತ್ ರೇ ನಿರ್ದೇಶನದ ‘ಅಪೂರ್ ಸಂಸಾರ್, ‘ಪಥೇರ್ ಪಾಂಚಾಲಿ’ ಅಲ್ಲದೇ ಹಿಂದಿನ ನಿರ್ದೇಶಕರ, ನಟರ ಸಿನಿಮಾಗಳಿವೆ. ಆದರೆ, ಕನ್ನಡದ ಖ್ಯಾತ ನಟರಾದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್‌ನಾಗ್ ಅವರ ಯಾವುದೇ ಸಿನಿಮಾಗಳು ಪಟ್ಟಿಯಲ್ಲಿಲ್ಲದಿರುವುದು ಕನ್ನಡ ಪ್ರೇಕ್ಷಕರ ಕಣ್ಣು ಕೆಂಪಾಗಿಸಿದೆ. ಕನ್ನಡದ ದಿಗ್ಗಜರ ಚಿತ್ರಗಳನ್ನು ಗುರುತಿಸದೇ ಇರುವುದಕ್ಕೆ ಐಎಂಡಿಬಿ ವಿರುದ್ಧ ಜಾಲತಾಣದಲ್ಲಿ ಕನ್ನಡ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.