ಸಾರಿಗೆ ಇಲಾಖೆಗೆ 234.34 ಕೋಟಿ ರೂ. ಆದಾಯ ನಿರೀಕ್ಷೆ

Session 1
Published on

ಬೆಳಗಾವಿ: ರಾಜ್ಯ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೆ ತಿದ್ದುಪಡಿ) ವಿಧೇಯಕ ಹಾಗೂ ರಾಜ್ಯ ಉಚ್ಚ ನ್ಯಾಯಾಲಯ (ತಿದ್ದುಪಡಿ) ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮೂಲಕ ಸರ್ಕಾರ 234.34 ಕೋಟಿ ರೂ. ಆದಾಯ ನಿರೀಕ್ಷಿಸಿದೆ. ಸರಕು ವಾಹನ, ಶಾಲಾ ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳ ಮಾಲೀಕತ್ವದ ವಾಹನ, ಮೋಟಾರ್ ಕ್ಯಾಬ್ ಮತ್ತು ವಿದ್ಯುತ್ ಚಾಲಿತ ವಾಹನಗಳಿಂದ ಪ್ರಸ್ತಾವಿತ ಶಾಸಕನಾತ್ಮಕ ಕ್ರಮದ ಮೂಲಕ ಹೊಸ ನೋಂದಣಿಯ ವಾಹನಗಳ ಅಂದಾಜು ಹಣಕಾಸು ರಾಜಸ್ವ ಸುಮಾರು 234.34 ಕೋಟಿ ರೂ.ಗಳಾಗಲಿದೆ ಎಂದು ಲೆಕ್ಕಹಾಕಲಾಗಿದೆ.

ಸರಕು ವಾಹನಗಳ ತೂಕ ಇತ್ಯಾದಿಗಳ ಆಧಾರದ ಮೇಲೆ ತೆರಿಗೆ ಪ್ರಮಾಣವನ್ನು ನಿರ್ದಿಷ್ಟಪಡಿಸುವುದಕ್ಕೆ ವಿಧೇಯಕದಲ್ಲಿ ಅವಕಾಶ ಒದಗಿಸಿದ್ದು, ಹೊಸ ವಾಹನಗಳ ನೋಂದಣಿ ಹಾಗೂ ನೋಂದಾಯಿತ ವಾಹನಗಳ ನವೀಕರಣದ ಮೇಲಿನ ಮೋಟಾರು ವಾಹನ ತೆರಿಗೆಯನ್ನೂ ಪರಿಷ್ಕರಿಸಲು ತಿದ್ದುಪಡಿ ವಿಧೇಯಕದಲ್ಲಿ ಪ್ರಸ್ತಾಪಿಸಿದೆ.

ಸಿವಿಲ್ ನ್ಯಾಯಾಲಯಗಳ ವಿಧೇಯಕ: ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಆರ್ಥಿಕ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಸ್ತಾವಿಸಿರುವ ಕರ್ನಾಟಕ ಸಿವಿಲ್ ನ್ಯಾಯಾಲಯಗಳ(ತಿದ್ದುಪಡಿ) ವಿಧೇಯಕವನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ ಮಂಡನೆ ಮಾಡಿದರು. ಈ ವಿಧೇಯಕದಲ್ಲಿ ಹೈಕೋರ್ಟ್​ನಲ್ಲಿ ಬಾಕಿಯಿರುವ ಪ್ರಕರಣಗಳ ಹೊರೆಯನ್ನು ಇಳಿಸಲು ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಅಧಿನಿಯಮ 1964 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ಮಂಡಿಸಲಾಗಿದೆ.

ಉಚ್ಚನ್ಯಾಯಾಲಯ ವಿಧೇಯಕ: ತ್ವರಿತ ವಿಲೇವಾರಿ ಗುರಿ ಸಾಧಿಸುವ ನಿಟ್ಟಿನಲ್ಲಿ ಕರ್ನಾಟಕ ಕಾನೂನು ಆಯೋಗವು ಮಾಡಿರುವ ಶಿಫಾರಸಿನ ಅನ್ವಯ ಕರ್ನಾಟಕ ಉಚ್ಚನ್ಯಾಯಾಲಯ ತಿದ್ದುಪಡಿ ವಿಧೇಯಕವನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ ವಿಧಾನಸಭೆಯಲ್ಲಿ ಮಂಡಿಸಿದರು.

ಮುದ್ರಾಂಕ ಶುಲ್ಕ ಆದಾಯ ಹೆಚ್ಚಳ

ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ಸ್ಟಾಂಪ್ ಡ್ಯೂಟಿ ಪರಿಷ್ಕರಣೆ ಮಾಡಲಾಗಿಲ್ಲ. ಅಫಿಡವಿಟ್​ಗೆ 2000ನೇ ಇಸವಿಯಲ್ಲಿ 20 ರೂ. ಇತ್ತು. ಅದಾದ ಮೇಲೆ ಈ ದರವನ್ನು ಪರಿಷ್ಕರಿಸಿಲ್ಲ. ಅದೇ ರೀತಿ ಸೇಲ್ ಅಗ್ರಿಮೆಂಟ್​ಗೆ 1995ರಲ್ಲಿ 1000 ರೂ. ಇತ್ತು. ಎನ್ರೋಲ್ಮೆಂಟ್ ಸರ್ಟಿಫಿಕೇಟ್ ಗೆ 2003ರಲ್ಲಿ 500 ರೂ. ಕ್ಯಾನ್ಸಲೇಷನ್ ಆಪ್ ಇನ್ಸ್​ಟ್ರುಮೆಂಟ್​ಗೆ 2006 ರಲ್ಲಿ 100 ರೂ. ಲೆಟರ್ ಆಪ್ ಅಲಾಟ್ಮೆಂಟ್ ಗೆ 2003ರಲ್ಲಿ 1 ರೂ. ಪಾರ್ಟಿಷನ್ ಗೆ 1999ರಲ್ಲಿ 250 ರೂ. ನಿಗದಿ ಮಾಡಲಾಗಿತ್ತು. ಆದರೆ, ಈ ಯಾವ ದರಗಳನ್ನೂ ಈವರೆವಿಗೂ ಪರಿಷ್ಕರಿಸಲಾಗಿಲ್ಲ. ಇದೀಗ ಪರಿಷ್ಕರಿಸಲಾಗುತ್ತಿದೆ. ಈ ಮೊದಲು ಸ್ಟಾಂಪ್ ಡ್ಯೂಟಿಯಿಂದ ಸರ್ಕಾರಕ್ಕೆ ವಾರ್ಷಿಕ 1,000 ಕೋಟಿ ರೂ. ಆದಾಯ ಲಭ್ಯವಾಗುತ್ತಿದ್ದು, ಈ ತಿದ್ದುಪಡಿ ವಿಧೇಯಕದಿಂದ ಶೇ.10 ಆದಾಯ ಹೆಚ್ಚುವ ಸಾಧ್ಯತೆ ಇದೆ. ಆದರೆ, ಇದರಲ್ಲಿ ಆದಾಯ ಸೋರಿಕೆಯನ್ನು ತಡೆದು ದೊಡ್ಡ ದೊಡ್ಡ ಸಾಂಸ್ಥಿಕ ಸಂಸ್ಥೆಗಳನ್ನೂ ಸಹ ಸ್ಟಾಂಪ್ ಡ್ಯೂಟಿ ಅಡಿಗೆ ತರಲು ಮುಂದಿನ ಜನವರಿಯಲ್ಲಿ ಹೊಸ ಆಕ್ಷನ್ ಪ್ಲ್ಯಾನ್ ಸಿದ್ಧಪಡಿಸಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.

ವಕೀಲರ ಮೇಲೆ ಹಲ್ಲೆಗೈದರೆ 3 ವರ್ಷ ಶಿಕ್ಷೆ

ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023ನ್ನು ಮಂಡಿಸುವ ಮೂಲಕ ಸರ್ಕಾರ ವಕೀಲರ ರಕ್ಷಣೆಗೆ ಮುಂದಾಗಿದೆ. ವಕೀಲರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಅಪರಾಧ ಎಸಗುವ ಪ್ರತಿ ವ್ಯಕ್ತಿಯು ಆರು ತಿಂಗಳಿನಿಂದ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಾರವಾಸ, ಒಂದು ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡಿತನಾಗುವ ಪ್ರಸ್ತಾಪ ಮಾಡಲಾಗಿದೆ. ಹಾಗೆಯೇ, ನ್ಯಾಯವಾದಿಯನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ, ಬಂಧನದ 24 ಗಂಟೆ ಒಳಗಾಗಿ ಆ ನ್ಯಾಯವಾದಿ ಸದಸ್ಯನಾಗಿರುವ ನ್ಯಾಯವಾದಿಗಳ ಅಸೋಸಿಯೇಷನ್ನಿನ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಬಂಧನದ ವಿಷಯವನ್ನು ಪೊಲೀಸರು ತಿಳಿಸಬೇಕಾಗುತ್ತದೆ. ಕಾನೂನು ಜಾರಿ ಏಜೆನ್ಸಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿನ ಯಾವುದೇ ಕಾನೂನಾತ್ಮಕ ಪ್ರತಿಬಂಧಕ ಕ್ರಮವು ಹಿಂಸಾಚಾರ ಆಗುವುದಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.

ಸ್ಟಾಂಪ್ ವಿಧೇಯಕ ಒಪ್ಪಿಗೆ

ರಾಜ್ಯದಲ್ಲಿ ಜನ ಸಾಮಾನ್ಯರ ನೋಂದಣಿ (ರಿಜಿಸ್ಟೆŠೕಷನ್) ರಹಿತ ವ್ಯವಹಾರಗಳಿಗೂ ಕಾನೂನಿನ ರಕ್ಷಣೆ ನೀಡುವ, ಸರಳೀಕರಣಗೊಳಿಸುವ, ಸರ್ಕಾರಕ್ಕೆ ಆದಾಯ ವೃದ್ಧಿಸುವ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023ಕ್ಕೆ ಮಂಗಳವಾರ ಮೇಲ್ಮನೆಯಲ್ಲಿ ಒಪ್ಪಿಗೆ ಪಡೆಯಿತು. ವಿಧಾನ ಸಭೆಯಲ್ಲಿ ಅಧಿಕೃತವಾಗಿ ಅಂಗೀಕಾರವಾಗಿದ್ದ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕವನ್ನು ಪರಿಷತ್​ನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದರು. ಈ ಕುರಿತು ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕಳೆದ 3 ದಶಕಗಳಿಂದಲೂ ಸ್ಟಾಂಪ್ ಡ್ಯೂಟಿ ಪರಿಷ್ಕರಣೆಯಾಗಿಲ್ಲ. ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಶುಲ್ಕ ಪಾವತಿಸುವ ಎಲ್ಲ ವ್ಯವಹಾರಗಳಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದರು. ಸಾಂಸ್ಥಿಕ ಬ್ಯಾಂಕ್ ವ್ಯವಹಾರ, ಸರ್ವೀಸ್ ಕಾಂಟ್ರಾಕ್ಟ್, ದೊಡ್ಡ ಕಂಪನಿಗಳು ಹಾಗೂ ಬ್ಯಾಂಕ್​ಗಳು ಸರ್ಕಾರದ ಜತೆಗೆ ನಡೆಸುವ ವಹಿವಾಟು, ಚಾರಿಟಬಲ್ ಟ್ರಸ್ಟ್, ಸೇಲ್ ಅಗ್ರಿಮೆಂಟ್, ಅಫಿಡವಿಟ್, ಎನ್​ರೋಲ್ ಮೆಂಟ್ ಸೇರಿ ಎಲ್ಲದಕ್ಕೂ ಸ್ಟಾಂಪ್ ಡ್ಯೂಟಿ ಇದೆ. ಆದರೆ, ಜನ ಪಾವತಿ ಮಾಡುತ್ತಿಲ್ಲ. ಇದಕ್ಕೆಲ್ಲ ಕಡಿವಾಣ ಬೀಳಲಿದೆ ಎಂದರು.

ಮೇಲ್ಮನೆಯಲ್ಲಿ 4 ವಿಧೇಯಕ ಮಂಡನೆ

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, ಕರ್ನಾಟಕ ವೈದ್ಯಕೀಯ ಕೋರ್ಸ್ ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ 2023, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ (ತಿದ್ದುಪಡಿ) ವಿಧೇಯಕ 2023 ಮತ್ತು ಕರಾವಳಿ ಅಭಿವೖದ್ಧಿ ಮಂಡಳಿ ವಿಧೇಯಕ 2023ಗಳನ್ನು ಕಾರ್ಯದರ್ಶಿಗಳು ಮಂಗಳವಾರ ವಿಧಾನ ಪರಿಷತ್ ಮುಂದಿಟ್ಟರು. ಈ ವಿಧೇಯಕಗಳ ಪರ್ಯåಯಲೋಚನೆ, ಅಂಗೀಕಾರ ಪ್ರಕ್ರಿಯೆ ಇದೆ ಅಧಿವೇಶನದಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net