

ಸಿಂಗಾಪುರ: ಸಿಂಗಾಪುರದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿಯೇ ಸಾಗಿದ್ದು, ನಿನ್ನೆಯಿಂದ ಇಲ್ಲಿಯವರೆಗೆ ಒಂದೇ ದಿನದಲ್ಲಿ 233 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 59 ಮಂದಿ ಭಾರತೀಯರು ಎನ್ನುವುದು ಆಘಾತಕಾರಿ ಸಂಗತಿಯಾಗಿದೆ.
ಈ ಮೂಲಕ ಸಿಂಗಾಪುರದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2,532ಕ್ಕೆ ಏರಿಕೆ ಆಗಿದೆ. 233 ಸೋಂಕಿತರ ಪೈಕಿ 51 ಜನರು ಒಂದೇ ಕಡೆ ಸೇರಿದ್ದರು. ಹೀಗಾಗಿ ಇವರಲ್ಲಿ ವೈರಸ್ ಸಾಮೂಹಿಕವಾಗಿ ಹರಡಿದೆ ಎಂದು ಸರ್ಕಾರ ಹೇಳಿದೆ. ಇನ್ನು, 15 ಮಂದಿ ಸೋಂಕಿತರ ಜತೆ ನೇರ ಸಂಪರ್ಕ ಹೊಂದಿದ್ದರು. ಆದರೆ, ಉಳಿದ 167 ಮಂದಿ ಯಾರ ಜತೆ ಸಂಪರ್ಕದಲ್ಲಿದ್ದರು, ಅವರಿಗೆ ಸೋಂಕು ತಗುಲಿದ್ದು ಹೇಗೆ ಎನ್ನುವುದು ಇನ್ನೂ ಪತ್ತೆಯಾಗಬೇಕಿದೆ.
ಸೋಂಕಿತರ ಪೈಕಿ ಹೆಚ್ಚಿನವರು ಪಂಚತಾರಾ ಕ್ಯಾಸಿನೋ ರೆಸ್ಟೋರೆಂಟ್, ಮೆಕ್ಡಿ ಸೇರಿ ವಿವಿಧ ಭಾಗಗಳಲ್ಲಿ ಇವರು ಸುತ್ತಾಟ ನಡೆಸಿದ್ದರು. ಈ ವೇಳೆ ಸೋಂಕು ಹರಡಿರುವ ಸಾಧ್ಯತೆ ಇದೆ. ಸಿಂಗಾಪುರದಲ್ಲಿ ಸೋಂಕಿಗೆ 8 ಮಂದಿ ಮೃತಪಟ್ಟಿದ್ದಾರೆ. 976 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಈ ಪೈಕಿ 31 ಮಂದಿ ಐಸಿಯುನಲ್ಲಿ, 988 ಮಂದಿ ಸಾಮಾನ್ಯ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯ ಮೆಘಾ ಮುಸ್ತಾಫಾ ಸೆಂಟರ್ಗೆ ತೆರಳಿದ್ದ ನಾಲ್ವರು ಭಾರತೀಯರಲ್ಲಿ ಸೋಂಕು ದೃಢಪಟ್ಟಿದ್ದು, ಭಾರತೀಯರ ಮೂಲದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇಲ್ಲಿ, ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮಾಸ್ಕ್, ಗ್ಲೌವ್ಸ್ ಮತ್ತು ಸ್ಯಾನಿಟೈಸರ್ಗಳ ಬಳಕೆ ಕಡ್ಡಾಯ ಮಾಡಲಾಗಿದೆ. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯವಾಗಿದೆ. ಇಲ್ಲಿ ಭಾಗಶಃ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಮನೆಯಿಂದ ಹೊರಬರುವಂತೆ ಸೂಚಿಸಲಾಗಿದೆ. (ಏಜನ್ಸೀಸ್)