ತಾಯಿಯ ತಾಳಿ ಕಿತ್ತ ಯುವಕರ ಗುಂಪು: ಮನನೊಂದು ನೇಣಿಗೆ ಶರಣಾದ ಯುವಕ

Suicide
Published on

ಮೈಸೂರು: ಮನೆಗೆ ನುಗ್ಗಿ ಗಲಾಟೆ ನಡೆಸಿದ್ದಲ್ಲದೆ, ತಾಯಿಯ ತಾಳಿಯನ್ನು ಕಿತ್ತುಹಾಕಿ ಅವಮಾನಿಸಿದ್ದಕ್ಕೆ ಬೇಸರಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ನಿವಾಸಿ ಬಾಲರಾಜ್(23) ಮೃತ ಯುವಕ. ಬಾಲರಾಜ್ ತಾಯಿಯೊಂದಿಗೆ ವಾಸವಿದ್ದ. ಇತ್ತೀಚೆಗೆ ನಾಲ್ವರು ಯುವಕರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅಲ್ಲದೆ, ತಾಯಿಯ ತಾಳಿ ಕಿತ್ತುಹಾಕಿ ಅವಮಾನ ಮಾಡಿದ್ದರು. ಯಾವ ವಿಚಾರಕ್ಕೆ ಗಲಾಟೆ ಮಾಡಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ, ಬಾಲರಾಜ್​ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.

ಬಳಿಕ ಪೊಲೀಸರು ಯುವಕರನ್ನು ಕರೆಸಿ ರಾಜಿ ಮಾಡಿ ಕಳುಹಿಸಿದ್ದರು. ಗ್ರಾಮಕ್ಕೆ ಹಿಂದಿರುಗಿದ ಬಳಿಕ ನಮ್ಮನ್ನು ಏನೂ ಮಾಡಲು ಆಗಲಿಲ್ಲ ಎಂದು ಯುವಕರ ಗುಂಪು ಬಾಲರಾಜ್​ನನ್ನು ರೇಗಿಸಿತ್ತು. ಇದರಿಂದ ಮನನೊಂದ ಬಾಲರಾಜ್ ದೇವಸ್ಥಾನದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿರುವ ಬಾಲರಾಜ್, ನಡೆದ ಘಟನೆಯನ್ನು ವಿವರಿಸಿದ್ದಾನೆ. ಈ ಸಂಬಂಧ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net