ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನ: 22 ವಿದ್ಯಾರ್ಥಿಗಳು ಸಜೀವ ದಹನ, ನಾಲ್ವರು ಕಣ್ಮರೆ

Ukraine
Published on

ಕೈವ್​: ಲ್ಯಾಂಡಿಂಗ್​ ವೇಳೆ ಸೇನಾ ವಿಮಾನ ಪತನನೊಂಡು 22 ಮಂದಿ ಸಜೀವ ದಹನವಾಗಿರುವ ಘಟನೆ ಉಕ್ರೇನ್​ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ವಿಮಾನವು ವಾಯುಯಾನ ಶಾಲಾ ವಿದ್ಯಾರ್ಥಿಗಳನ್ನು ಹೊತ್ತು ಬರುತ್ತಿತ್ತು. ನಿಲ್ದಾಣದಲ್ಲಿ ಇನ್ನೇನು ಲ್ಯಾಂಡಿಂಗ್​ ಆಗಬೇಕೆನ್ನುವಷ್ಟರಲ್ಲಿ ಪತನಗೊಂಡಿದೆ. ಅಲ್ಲದೆ, ವಿಮಾನವು ಸ್ಫೋಟಿಸಿ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಕಲಾಗಿದೆ ಎಂದು ಉಕ್ರೇನ್​ನ ತುರ್ತು ಸೇವಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಉಕ್ರೇನ್​ ರಾಜಧಾನಿ ಕೈವ್​ನಿಂದ ಸುಮಾರು 400 ಕಿ.ಮೀ ದೂರವಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ವೇಳೆ ಈ ಅವಘಡ ಸಂಭವಿಸಿದೆ.

ವಿಮಾನದಲ್ಲಿ ಸೇನಾ ಸಿಬ್ಬಂದಿಯು ಸಹ ಇದ್ದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ದೇಶದ ರಕ್ಷಣಾ ಸಚಿವಲಾಯದ ವಾಯುಯಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತನಕ್ಕೆ ಕಾರಣವೇನೆಂಬುದು ಈ ಕ್ಷಣದವರೆಗೂ ನಿಖರವಾಗಿ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಆದೇಶಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net