

Electricity Bill: ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಸಾವಿರ ರೂ.ಗಿಂತ ಕಡಿಮೆ ಇರುವ ವಿದ್ಯುತ್ ಬಿಲ್ ಬರುತ್ತದೆ. ಆದರೆ, ಕೆಲವರ ಮನೆಗಳಲ್ಲಿ ಮಾತ್ರ ಭಾರೀ ಪ್ರಮಾಣದ ಎಲೆಕ್ಟ್ರಿಕ್ ವಸ್ತುಗಳ ಬಳಕೆಯಿಂದ ಹೆಚ್ಚುವರಿ ಕರೆಂಟ್ ಬಿಲ್ ಬರುತ್ತದೆ. ಆದರೆ, ಇಲ್ಲೊಬ್ಬರ ನಿವಾಸದಲ್ಲಿ ಸಾವಿರ ಗಡಿದಾಟಿ ಲಕ್ಷವನ್ನು ಹಿಂದಿಕ್ಕಿ ಕೋಟಿ ರೂ.ನಲ್ಲಿ ಮುದ್ರಣಗೊಂಡ ವಿದ್ಯುತ್ ಬಿಲ್ ಸದ್ಯ ನೆಟ್ಟಿಗರ ಹುಬ್ಬೇರಿಸಿದೆ ಹಾಗೂ ನಿಬ್ಬೆರಗಾಗಿಸಿದೆ.
210 ಕೋಟಿ ರೂ. ವಿದ್ಯುತ್ ಬಿಲ್ ಪಡೆದ ವ್ಯಕ್ತಿಯನ್ನು ಹಿಮಾಚಲ ಪ್ರದೇಶದ ಹಮೀರ್‌ಪುರದ ನಿವಾಸಿ ಲಲಿತ್ ಧಿಮಾನ್ ಎಂದು ಹೇಳಲಾಗಿದೆ. ಸಣ್ಣ ಪ್ರಮಾಣದ ಕಾಂಕ್ರೀಟ್ ವ್ಯವಹಾರವನ್ನು ನೋಡಿಕೊಂಡು ಸಾಧಾರಣ ಜೀವನವನ್ನು ಸಾಗಿಸುತ್ತಿದ್ದ ಧಿಮಾನ್, ಕೋಟಿ ರೂ. ಬಿಲ್ ನೋಡಿ ಅಕ್ಷರಶಃ ಕಂಗಾಲಾಗಿದ್ದಾರೆ. ಬಿಲ್ನ ಒಟ್ಟು ಮೊತ್ತ 2,10,42,08,405 (210 ಕೋಟಿ ರೂ.) ಆಗಿದ್ದು, ಇಷ್ಟು ದೊಡ್ಡ ಬಿಲ್ ಬರಲು ಹಿಂದಿರುವ ಕಾರಣವೇನು ಎಂದು ಲಲಿತ್ರ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.
ದಿಗ್ಭ್ರಮೆಗೊಳಿಸಿದ ಬಿಲ್ ಕಂಡ ತಕ್ಷಣವೇ ಅಧಿಕಾರಿಗಳನ್ನು ಸಂಪರ್ಕಿಸಿದ ಲಲಿತ್, 210 ಕೋಟಿ ರೂ. ಮೊತ್ತದ ಬಿಲ್ ಬರುವಷ್ಟು ಕರೆಂಟ್ ನಮ್ಮ ಮನೆಯಲ್ಲಿ ಯಾರೂ ಕೂಡ ಉಪಯೋಗಿಸಲ್ಲ. ಕೋಟಿ ರೂ.ನಷ್ಟು ಬಿಲ್ ತೋರಿಸುವ ಮೀಟರ್ ರೀಡಿಂಗ್ ಯಾವುದು ಎಂದೆಲ್ಲಾ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಬಿಲ್ನ ಪರಿಶೀಲಿಸಿ ಉತ್ತರಿಸಿದ ಅಧಿಕಾರಿಗಳು, ಇದು ತಾಂತ್ರಿಕ ದೋಷದಿಂದ ಬಂದಿರುವ ಬಿಲ್ ಎಂಬುದನ್ನು ಸ್ಪಷ್ಟಪಡಿಸಿ, ಸರಿಯಾದ ರೀಡಿಂಗ್ ನೋಡಿ ಹೊಸ ಬಿಲ್ ಅನ್ನು ಹಸ್ತಾಂತರಿಸಿದ್ದಾರೆ.
ಲಲಿತ್ ಅವರ 210 ಕೋಟಿ ರೂ. ಬಿಲ್ ಸಮಸ್ಯೆಯನ್ನು ಬಗೆಹರಿಸಿದ ವಿದ್ಯುತ್ ಇಲಾಖೆಯು, ಅದರಲ್ಲಿನ ಸಂಖ್ಯೆಯನ್ನು 4,047 ರೂ.ಗೆ ಇಳಿಸಿ, ಪಾವತಿ ಮಾಡುವಂತೆ ತಿಳಿಸಿದೆ,(ಏಜೆನ್ಸೀಸ್).