ಐಪಿಎಲ್​ ಹರಾಜು ಪ್ರಕ್ರಿಯೆಗೂ ಮುನ್ನ ಮೂವರು ಆಟಗಾರರನ್ನು ಕೈಬಿಡಲು ಎಸ್​ಆರ್​ಎಚ್​​ ನಿರ್ಧಾರ? | IPL Auction 2026

srh
Published on

ನವದೆಹಲಿ: 18ನೇ ಐಪಿಎಲ್‌ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (IPL Auction 2026) ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದ ಎಸ್​ಆರ್​ಎಚ್​, ಕೇವಲ ಆರು ಮ್ಯಾಚ್​ನಲ್ಲಿ ಮಾತ್ರ ಗೆಲುವು ಸಾಧಿಸಿತು. 13 ಪಾಯಿಂಟ್​ನಿಂದ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಸೀಸನ್​ಗೆ ಗುಡ್​ಬೈ ಹೇಳಿದ ಸನ್​ರೈಸರ್ಸ್​, 2026ರ ಹರಾಜು ಪ್ರಕ್ರಿಯೆಗೂ ಮುನ್ನವೇ ತಂಡದಲ್ಲಿ ಕೆಲವು ಬದಲಾವಣೆಗಳನ್ನು ತರಲು ಮುಂದಾಗಿದೆ.

ಬ್ಯಾಟಿಂಗ್ ಅದ್ಭುತವಾಗಿದ್ದೇ ಆದರೂ ಬೌಲಿಂಗ್ ವಿಭಾಗವು ಕಮಾಲ್ ಮಾಡಲಿಲ್ಲ. ಈ ಸಂದರ್ಭದಲ್ಲಿ, 2026ರ ಐಪಿಎಲ್ ಹರಾಜಿನ ಮೊದಲು ಟ್ರೇಡಿಂಗ್ ವಿಂಡೋ ಮೂಲಕ ಮೂವರು ಆಟಗಾರರನ್ನು ರಿಲೀಸ್ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ಕ್ರಿಕೆಟ್​ ಮೂಲಗಳು ತಿಳಿಸಿವೆ. ಹಾಗಿದ್ದರೆ, ಯಾರು ಆ ಮೂವರು ಕ್ರಿಕೆಟಿಗರು? ಯಾವ ಕಾರಣಕ್ಕಾಗಿ ಕೈಬಿಡಲು ಮುಂದಾಗಿದೆ ಎಂಬುದರ ವಿವರ ಹೀಗಿದೆ ನೋಡಿ.

ಮೊಹಮ್ಮದ್ ಶಮಿ

2025ರ ಐಪಿಎಲ್ ಮೆಗಾ ಒಪ್ಪಂದದಲ್ಲಿ ಮೊಹಮ್ಮದ್ ಶಮಿಯನ್ನು 10 ಕೋಟಿ ರೂ.ಗೆ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತು. ಅವರ ಅನುಭವ ಮತ್ತು ವೇಗ ತಂಡಕ್ಕೆ ಉಪಯುಕ್ತ ಎಂದು ಭಾವಿಸಿದ ಫ್ರಾಂಚೈಸಿ, ಅವರಿಂದ ಉತ್ತಮ ಪ್ರದರ್ಶನವನ್ನೇ ನಿರೀಕ್ಷಿಸಿತ್ತು. ಆದಾಗ್ಯೂ, ಶಮಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಆಡಿದ 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಪಡೆದಿದ್ದಾರೆ. ಆರಂಭಿಕ ಓವರ್‌ಗಳಲ್ಲಿ ಅಥವಾ ಡೆತ್ ಓವರ್‌ಗಳಲ್ಲಿ ಅವರು ಪ್ರಭಾವ ಬೀರಲು ಯಶಸ್ವಿಯಾಗಲಿಲ್ಲ. ವಯಸ್ಸು ಮತ್ತು ಫಿಟ್‌ನೆಸ್‌ನಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಕೈಬಿಡಲು ಫ್ರಾಂಚೈಸಿ ಚಿಂತಿಸಿದೆ.

ರಾಹುಲ್ ಚಾಹರ್​

ಲೆಗ್ ಸ್ಪಿನ್ನರ್ ರಾಹುಲ್ ಚಾಹರ್​ರನ್ನು ಮೆಗಾ ಸೇಲ್‌ನಲ್ಲಿ 3.20 ಕೋಟಿ ರೂ.ಗೆ ಖರೀದಿಸಲಾಯಿತು. ಆದಾಗ್ಯೂ, ಇಡೀ ಸೀಸನ್​ನಲ್ಲಿ ರಾಹುಲ್​ ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ. ಆ ಪಂದ್ಯದಲ್ಲಿ ಅವರು ವಿಕೆಟ್​ ಕಬಳಿಸಲಿಲ್ಲ. ಈ ಪ್ರಕ್ರಿಯೆಯಲ್ಲಿ, ಚಾಹರ್ ಅವರನ್ನು ತಂಡದಿಂದ ಕೈಬಿಟ್ಟು, ಅವರ ಸ್ಥಾನಕ್ಕೆ ದೇಶೀಯ ಸ್ಪಿನ್ನರ್ ಅನ್ನು ಕರೆತರಲು ಫ್ರಾಂಚೈಸಿ ಎದುರುನೋಡುತ್ತಿದೆ.

ಇಶಾನ್ ಕಿಶನ್

ಮುಂಬೈ ಇಂಡಿಯನ್ಸ್​ನಲ್ಲಿ ಮಿಂಚಿದ್ದ ಎಡಗೈ ಬ್ಯಾಟರ್​, ವಿಕೆಟ್​ ಕೀಪರ್​ ಇಶಾನ್ ಕಿಶನ್​ರನ್ನು ಎಸ್​ಆರ್​ಎಚ್​, ಕಳೆದ ಬಾರಿಯ ಮೆಗಾ ಹರಾಜಿನಲ್ಲಿ 11.25 ಕೋಟಿ ರೂ.ಗೆ ಅವರನ್ನು ಖರೀದಿಸಿತು. 18ನೇ ಆವೃತ್ತಿಯಲ್ಲಿ ಅದ್ಭುತ ಓಪನಿಂಗ್ ನೀಡಿದ ಕಿಶನ್​, ತಮ್ಮ ಮೊದಲ ಪಂದ್ಯದಲ್ಲಿ ಶತಕ ಗಳಿಸಿದರು. ಅದಾದ ನಂತರ ಕಳಪೆ ಪ್ರದರ್ಶನದ ಹಾದಿ ಹಿಡಿದರು. ಇದು ಫ್ರಾಂಚೈಸಿ ಭರವಸೆಯನ್ನು ಕುಸಿಯುವಂತೆ ಮಾಡಿತು. ಆಡಿದ 13 ಇನ್ನಿಂಗ್ಸ್‌ಗಳಲ್ಲಿ ಇಶಾನ್​, 354 ರನ್ ಗಳಿಸಿದ್ದಾರೆ.

ಕಿಶನ್​ರ ಪ್ರದರ್ಶನವನ್ನು ಗಮನಿಸಿ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವ ಉತ್ತಮ ಬ್ಯಾಟ್ಸ್​ಮನ್ ಹಾಗೂ ವಿಕೆಟ್​ ಕೀಪರ್​ನನ್ನು ಕರೆದುಕೊಳ್ಳಲು ಫ್ರಾಂಚೈಸಿ ಮುಂದಾಗಿದೆ ಎಂದು ಹೇಳಲಾಗಿದೆ. ಅಸಲಿಗೆ, ಈ ಮೂವರಿಗೂ ಸನ್​ರೈಸರ್ಸ್​ ಹೈದರಾಬಾದ್​ ಗುಡ್​ಬೈ ಹೇಳಲಿದ್ಯಾ? ಹೇಳಿದರೆ, ಯಾರನ್ನು ಇವರ ಸ್ಥಾನಕ್ಕೆ ಕರೆತರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net