

ಬೆಂಗಳೂರು: ಬಜೆಟ್‌ನಲ್ಲಿ ಬೆಂಗಳೂರಿಗೆ ಬರೋಬ್ಬರಿ 45 ಸಾವಿರ ಕೋಟಿ ರೂ. ಅನುದಾನ ನೀಡುವ ಮೂಲಕ ಬಂಪರ್ ಕೊಡುಗೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.
ಬೆಂಗಳೂರು ವೈಟ್ ಟಾಪಿಂಗ್, ರಸ್ತೆ ಅಭಿವೃದ್ಧಿ, ನಗರೋತ್ಥಾನ, ತಾಜ್ಯ ನಿರ್ವಹಣೆ, ರಾಜಕಾಲುವೆ ತೆರವು & ದುರಸ್ತಿಗೆ ಅನುದಾನ, ಮೆಟ್ರೋ, ಬೆಂಗಳೂರು ಉಪನಗರ ರೈಲ್ವೆ ಯೋಜನೆ, ಬ್ರ್ಯಾಂಡ್ ಬೆಂಗಳೂರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ 45 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ.
ಡಿಕೆ ಶಿವಕುಮಾರ್ ನೇತೃತ್ವದ ಬ್ರಾಂಡ್ ಬೆಂಗಳೂರು ಉಪಕ್ರಮಕ್ಕೆ 45,000 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಇದರೊಂದಿಗೆ ನಮ್ಮ ಮೆಟ್ರೋ ವೇಗ ಹೆಚ್ಚಿಸಲು ಸಹ ಕ್ರಮ ಕೈಗೊಂಡಿರುವ ಬಗ್ಗೆ ತಿಳಿಸಿದರು.
ಯಾವುದಕ್ಕೆ ಎಷ್ಟು ಹಣ?
*ಬೈಯಪ್ಪನಹಳ್ಳಿ ಸರ್ಎಂವಿ ರೈಲ್ವೇ ಟರ್ಮಿನಲ್ಗೆ ಸಂಪರ್ಕ ಕಲ್ಪಿಸಲು ಹೊಸ ಮೇಲ್ಸೇತುವೆ, ಮೆಟ್ರೋದಿಂದ ಟರ್ಮಿನಲ್ಗೆ ಸಂಪರ್ಕ ಕಲ್ಪಿಸುವಂತೆ ಫ್ಲೈ ಓವರ್-263 ಕೋಟಿ
*ನಗರದಲ್ಲಿ ಹೊಸದಾಗಿ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ-1,411 ಕೋಟಿ
*2023 - 24ನೇ ಸಾಲಿನಲ್ಲಿ ನಗರದಲ್ಲಿ ಹೊಸ 100 ಕಿಮೀ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ-800 ಕೋಟಿ
*2023-24ರಲ್ಲಿ ಈಗಾಗಲೇ ಹೈಡೆನ್ಸೆಟಿ ಕಾರಿಡಾರ್ಗಳಾಗಿ ಗುರುತಿಸಿರುವ 83ಕಿ.ಮೀ.ರಸ್ತೆಗಳ ಅಭಿವೃದ್ಧಿಗೆ-273 ಕೋಟಿ ರೂ.
*ನಗರದ ಕೆರೆಗಳ ತ್ಯಾಜ್ಯ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಕಾಮಗಾರಿ-1,250 ಕೋಟಿ
*ಇಂದಿರಾ ಕ್ಯಾಂಟೀನ್ಗಳ ನವೀಕರಣ, ದುರಸ್ತಿ, ಕೆಲ ಹೊಸ ಕ್ಯಾಂಟೀನ್ ನಿರ್ಮಾಣಕ್ಕಾಗಿ-100 ಕೋಟಿ
*BSWMCL ಸಂಸ್ಥೆಗೆ ಘನ ತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆಗೆ-100 ಕೋಟಿ
ಬೆಂಗಳೂರು ಉಪನಗರ ರೈಲು ಯೋಜನೆ
ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಜಾಗವನ್ನು 256 ಉದ್ಯಾನವನವಾಗಿ ಪರಿವರ್ತನೆ ಮಾಡಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ 70 ಕಿ.ಮೀ ಇರುವ ಮೆಟ್ರೋವನ್ನು 176 ಕಿಮೀಗೆ ವಿಸ್ತರಿಸಲಾಗುವುದು. ಹೆಬ್ಬಾಳದಿಂದ ಸರ್ಜಾಪುರ ವರೆಗಿನ 37ಕಿಮೀ ಉದ್ದದ ಮೆಟ್ರೋ ಯೋಜನೆಯನ್ನು, 15 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಲಾಗುವುದು. ಆದರೆ ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದಲೇ ಸಾವಿರ ಕೋಟಿ ಅನುದಾನ ನೀಡಲಾಗುವುದು.