ತಾಯಿ ಮೊಬೈಲ್​ನಿಂದ 31 ಚೀಸ್​ಬರ್ಗರ್​ ಆರ್ಡರ್​ ಮಾಡಿದ ಪುಟ್ಟ ಕಂದಮ್ಮ, ಆಮೇಲೇನಾಯ್ತು ಗೊತ್ತಾ?!

Baby Burger
Published on

ಹಾಸ್ಟನ್​(ಅಮೆರಿಕ): ಇಂದಿನ ದಿನಗಳಲ್ಲಿ ಮಕ್ಕಳು ಕೂಡ ಸ್ಮಾರ್ಟ್​ಫೋನ್​ ಪ್ರಿಯರಾಗಿದ್ದಾರೆ. ಮೊಬೈಲ್​ ಇಲ್ಲದಿದ್ದರೆ ಅವು ಊಟ ಮಾಡುವುದಿಲ್ಲ. ಯಾವ ಮಕ್ಕಳ ಕೈಯಲ್ಲಿ ನೋಡಿದರೂ ಮೊಬೈಲ್​​ ಇಟ್ಟುಕೊಂಡಿರುತ್ತವೆ. ಇಂದಿನ ತಾಂತ್ರಿಕ ಬದುಕಿನಲ್ಲಿ ಮೊಬೈಲ್​ ಕೂಡ ಜೀವನದ ಒಂದು ಭಾಗವಾಗಿಬಿಟ್ಟಿದೆ.

ಆದರೆ ಮಕ್ಕಳು ಮೊಬೈಲ್​ ಬಳಕೆ ಮಾಡುವುದರಿಂದ ಪಾಲಕರು ಇಕ್ಕಟ್ಟಿಗೆ ಸಿಲುಕುವ ಸಂದರ್ಭಗಳು ಬರುತ್ತಿರುತ್ತವೆ. ಅಂತಹ ಘಟನೆಯೊಂದು ಇಲ್ಲಿ ನಡೆದಿದೆ. ಎರಡು ವರ್ಷದ ಮಗುವೊಂದು ಕೈಯಲ್ಲಿದ್ದ ತನ್ನ ತಾಯಿಯ ಫೋನ್​ ತೆಗೆದು ಏನು ಮಾಡಿದ್ದಾನೆ ಗೊತ್ತಾ.. ಅಬ್ಬಬ್ಬಾ ಎಂತಹವರೂ ಆಶ್ಚರ್ಯವಾಗುತ್ತದೆ.

ಈ ಮಗು ಮಾಡಿದ ಯಡವಟ್ಟಿನಿಂದಾಗಿ ಪಾಲಕರ ಜೇಬಿಗೆ ಕತ್ತರಿ ಬಿದ್ದಿದೆ. ತನ್ನ ತಾಯಿಯ ಮೊಬೈಲ್​ನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ 31 ಚೀಸ್​ಬರ್ಗರ್​​ನ ಆರ್ಡರ್​ ಮಾಡಿಯೇ ಬಿಟ್ಟಿದ್ದಾನೆ. ಅಷ್ಟೇ ಅಲ್ಲ ಅದರ ಜತೆ 16 ಡಾಲರ್​ ಅಂದರೆ 1200 ರೂಪಾಯಿಗಳ ಟಿಪ್ಸ್​ ಕೂಡ ಕೊಟ್ಟಿದ್ದಾನೆ.

ಕೆಲ ಸಮಯದ ನಂತರ ಮನೆಗೆ ಬಾಗಿಲು ಶಬ್ದ ಕೇಳಿ ಬಾಗಿಲು ತೆರೆದು ನೋಡಿದರೆ ಮಹಿಳೆಗೆ ಆಶ್ಚರ್ಯವಾಗಿದೆ. ನಾನು ಏನೂ ಆರ್ಡರ್​ ಮಾಡಿಲ್ಲ ಇದು ಹೇಗೆ ಬಂತು ಎಂದು ಕೇಳಿದ್ದಾರೆ. ಇದಕ್ಕೆ ನಿಮ್ಮ ಮೊಬೈಲ್​ ಸಂಖ್ಯೆಯಿಂದಲೇ ಆರ್ಡರ್​ ಆಗಿದೆ ಎಂದು ಡೆಲಿವರಿ ಬಾಯ್​ ಮೆಸೇಜ್​ ತೋರಿಸಿದ್ದಾನೆ. ಇದರಿಂದ ಆಶ್ಚರ್ಯಗೊಂಡ ಆಕೆ ಮೊಬೈಲ್​ ಚೆಕ್​ ಮಾಡಿದಾಗ ತನ್ನ ಪುಟ್ಟ ಕಂದ ಮಾಡಿರುವ ಕೆಲಸವನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಕೊನೆಗೆ ವಿಧಿಯಿಲ್ಲದೇ ಅಷ್ಟೂ ಹಣವನ್ನು ನೀಡಿ ಬರ್ಗರ್​ ಪಡೆದಿದ್ದಾರೆ.

ಸದ್ಯ 31 ಬರ್ಗರ್​ ಜತೆ ನಗುತ್ತಿರುವ ಈ ಪುಟ್ಟ ಮಗುವಿನ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ತನ್ನ ತಾಯಿಯೊಂದಿಗಿರುವ ಮತ್ತೊಂದು ಚಿತ್ರವು ಗಮನ ಸೆಳೆದಿದೆ.

ಏನೇ ಇದ್ದರೂ ಮಕ್ಕಳಿಗೆ ಫೋನ್​ ನೀಡುವ ಮೊದಲು ಎಚ್ಚರಿಕೆಯಿಂದಿರುವುದು ಒಳ್ಳೆಯದು. ಇಲ್ಲದಿದ್ದರೆ ಈ ಮಗು ಮಾಡಿದಂತೆಯೇ ಜೇಬಿಗೆ ಕತ್ತರಿ ಬೀಳುವುದಂತೂ ಸತ್ಯ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net