2 ತಿಂಗಳ ಹಸುಗೂಸನ್ನು ಸೆಕ್ಯೂರಿಟಿಗಾರ್ಡ್ ಮನೆ ಮುಂದಿಟ್ಟು ಪರಾರಿ!

baby
Published on

ಬೆಂಗಳೂರು: ಸೆಕ್ಯೂರಿಟಿಗಾರ್ಡ್ ಮನೆಯ ಕಾಲಿಂಗ್ ಬೆಲ್ ಮಾಡಿ 2 ತಿಂಗಳ ಹಸುಗೂಸನ್ನು ಬಾಗಿಲ ಮುಂದಿಟ್ಟು ಅಪರಿಚಿತರು ಪರಾರಿಯಾಗಿದ್ದು, ಜ್ಞಾನಭಾರತಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಲ್ಲತ್ತಹಳ್ಳಿ ನಿವಾಸಿ ಬೆಮ್ರೋ ಕಾಲೇಜೊಂದರಲ್ಲಿ ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಪತ್ನಿ ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜು.7ರಂದು ರಾತ್ರಿ ಕೆಲಸಕ್ಕೆ ತೆರಳಿದ್ದರು. ಜು.8 ರಂದು ಮುಂಜಾನೆ 5.30ರಲ್ಲಿ ಮನೆಯ ಕಾಲಿಂಗ್ ಬೆಲ್ ಶಬ್ದವಾಗಿತ್ತು. ಬೆಮ್ರೋ ಕೆಲಸ ಮುಗಿಸಿಕೊಂಡು ವಾಪಾಸ್ಸಾಗಿರಬಹುದು ಎಂದು ಭಾವಿಸಿದ ಆತನ ಪತ್ನಿ ಮುಕ್ತಾಬಾಯಿ ಕೂಡಲೇ ಬಾಗಿಲು ತೆರೆದಾಗ ಯಾರೂ ಕಾಣಿಸಲಿಲ್ಲ. ಆದರೆ, ಬಾಗಿಲ ಬಳಿ 2 ತಿಂಗಳ ಗಂಡು ಮಗು ಕಂಡು ಬಂದಿತ್ತು. ಕೂಡಲೇ ಅಕ್ಕ-ಪಕ್ಕದಲ್ಲಿ ಹುಡುಕಾಡಿದರೂ ಯಾರೂ ಕಾಣಿಸಲಿಲ್ಲ.

ನಂತರ ಮುಕ್ತಾಬಾಯಿ ಈ ವಿಚಾರವನ್ನು ಮನೆ ಮಾಲೀಕರಿಗೆ ತಿಳಿಸಿದ್ದರು. ಮಾಲೀಕರ ಸಲಹೆ ಮೇರೆಗೆ ಪೊಲೀಸ್ ಸಹಾಯವಾಣಿ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಮಗುವನ್ನು ಆರೈಕೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪತ್ತೆಯಾಗಿರುವುದು ಯಾರ ಮಗುವೆಂದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಿ ಮಗುವಿನ ಪಾಲಕರನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net