

ಕೋಲ್ಕತ: ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ ವ್ಯಾಪ್ತಿಯ ಮನೆಯೊಂದರಲ್ಲಿ ಕಚ್ಚಾ ಬಾಂಬ್ ಸ್ಫೋಟವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಗಂಭೀರ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸಾಜಿದ್ ಮತ್ತು ರಾಜಾ ಎಂದು ಗುರುತಿಸಲಾಗಿದೆ. ಕಮರ್ಹಟಿ ಗೋಲಾಘಾಟ್ ಎಂಬಲ್ಲಿ ಈ ದುರಂತ ನಡೆದಿದೆ. ಕಮರ್ಹಟಿ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿದ್ದು, ಗಂಭೀರ ಗಾಯಗೊಂಡು ಬಿದ್ದಿದ್ದ ನಾಲ್ವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ದಾರಿ ಮಧ್ಯೆ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳಿಗೆ ಸಾಗರ್ ದತ್ತಾ ಮೆಡಿಕಲ್ ಕಾಲೇಜು ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಮುಂದುವರಿದಿದೆ. ದುರಂತಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)