ನಾಳೆ ಬೆಳಗಾವಿಗೆ ಪ್ರಧಾನಿ ಮೋದಿ; ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮುಂದೂಡಿಕೆ

PM Modi
Published on

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಫೆ.27ಕ್ಕೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯನ್ನು ಮುಂದೂಡಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಅನುದಾನಿತ, ಅನುದಾನ ರಹಿತ ಕಾಲೇಜುಗಳಿಗೆ ಆದೇಶ ಅನ್ವಯ ಆಗಲಿವೆ. ಫೆ.27ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮಾರ್ಚ್ 6ರಂದು ನಡೆಸುವಂತೆ ಸೂಚನೆ ನೀಡಲಾಗಿದೆ. ಬಸ್ ಸಂಚಾರ ವ್ಯತ್ಯಯ, ನಗರದಲ್ಲಿ ಎಲ್ಲೆಂದರಲ್ಲಿ ಮಾರ್ಗ ಬದಲಾವಣೆ ಸೇರಿ ಸಕಾಲದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಬೆಳಗಾವಗೆ ಆಗಮಿಸುತ್ತಿದ್ದು, ಮಾಲಿನಿ ಸಿಟಿಯಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಸುಮಾರು 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 50 ಎಕರೆ ಪ್ರದೇಶದಲ್ಲಿ ಮೂರು ಕಡೆಗಳಲ್ಲಿ ಪಾರ್ಕಿಂಗ್ ಸೌಲಭ್ಯ ಹಾಗೂ ಫಲಾನುಭವಿಗಳ ಆಗಮಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ. 1500ಕ್ಕೂ ಹೆಚ್ಚು ಬಸ್​ಗಳಲ್ಲಿ ರೈತರು, ಬಿಜೆಪಿ ಕಾರ್ಯಕರ್ತರು ನಾಳಿನ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ, 190 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಿದ ಬೆಳಗಾವಿ ರೈಲು ನಿಲ್ದಾಣ ಉದ್ಘಾಟನೆ, 1098 ಕೋಟಿ ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಲೋಕಾರ್ಪಣೆ, ಜಿಲ್ಲೆಯ 1132 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆ, ಬೆಳಗಾವಿ- ಧಾರವಾಡ ನೇರ ರೈಲು ಮಾರ್ಗದ ಕಾಮಗಾರಿಗೆ ಚಾಲನೆ ಸೇರಿದಂತೆ ಒಟ್ಟು 2,250 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net