ಟ್ರಾಫಿಕ್​ ಜಾಮ್​ನಿಂದಾಗಿ ಬೆಂಗಳೂರಿಗೆ ಪ್ರತಿ ವರ್ಷ 19 ಸಾವಿರ ಕೋಟಿ ರೂ. ನಷ್ಟ!

BNG Traffic
Published on

ನವದೆಹಲಿ: ಶ್ರೀಮಂತ ಇತಿಹಾಸ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಐಟಿ ಉದ್ಯಮಗಳ ಕಾರಣದಿಂದ ಬೆಂಗಳೂರನ್ನು ಭಾರತದ ಸಿಲಿಕಾನ್​ ವ್ಯಾಲಿ ಎಂದೇ ಖ್ಯಾತಿ ಪಡೆದಿದೆ. ಆದರೆ, ದುರಾದೃಷ್ಟವಶಾತ್ ಇದೇ ಬೆಂಗಳೂರು​ ಟ್ರಾಫಿಕ್​ ಜಾಮ್​ ಕುಖ್ಯಾತಿಯನ್ನು ಹೊಂದಿದೆ. ಸಾವಿಲ್ಲದ ಮನೆಯಿಲ್ಲ, ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ ಅನುಭವಿಸದ ವ್ಯಕ್ತಿಯಿಲ್ಲ ಎಂಬ ಪರಿಸ್ಥಿತಿ ನಮ್ಮ ಬೆಂದಕಾಳೂರದ್ದು. ಬಹುತೇಕ ಎಲ್ಲರು ಟ್ರಾಫಿಕ್​ ಕಿರಿಕಿರಿಯನ್ನು ಅನುಭವಿಸಿದ್ದಾರೆ. ಆದರೆ, ಇದೇ ಟ್ರಾಫಿಕ್​ನಿಂದ ಬೆಂಗಳೂರಿಗೆ ಭಾರೀ ನಷ್ಟವಾಗುತ್ತಿದೆ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಇತ್ತೀಚಿನ ಸಂಶೋಧನಾ ವರದಿ ಇದನ್ನು ನಂಬುವಂತೆ ಮಾಡಿದೆ.

ಹೌದು, ಟ್ರಾಫಿಕ್​ನಿಂದ ಬೆಂಗಳೂರು ನಗರಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿದೆ. ಈ ಸಂಗತಿ ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂ.ಎನ್. ಶ್ರೀಹರಿ ಮತ್ತು ಅವರ ತಂಡ ನೀಡಿರುವ ಸಂಶೋಧನಾ ವರದಿಯಲ್ಲಿ ಬಹಿರಂಗವಾಗಿದೆ.

ವರದಿಯ ಪ್ರಕಾರ ಟ್ರಾಫಿಕ್​ ಜಾಮ್​ನಿಂದಾಗಿ ಬೆಂಗಳೂರಿಗೆ ವರ್ಷಕ್ಕೆ 19 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗುತ್ತಿದೆ. ನಗರದಲ್ಲಿ 60 ಚಾಲ್ತಿಯಲ್ಲಿರುವ ಮೇಲ್ಸೇತುವೆ ಇದ್ದರೂ ಟ್ರಾಫಿಕ್​ನಿಂದ ಕೋಟಿ ಕೋಟಿ ರೂ. ಲಾಸ್ ಆಗುತ್ತಿದೆ. ವಾಹನದ ಸಮಯದ ನಷ್ಟ, ಇಂಧನ ನಷ್ಟ ಹಾಗೂ ಉದ್ಯೋಗಿಗಳ ಸಮಯ ನಷ್ಟದ ಆಧಾರದ ಮೇಲೆ ವರದಿಯನ್ನು ರೂಪಿಸಲಾಗಿದೆ.

ಈ ವರದಿಯನ್ನು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಾಗಿದೆ. ವರದಿಯಲ್ಲಿ ಸಂಚಾರ ನಿರ್ವಹಣೆ, ರಸ್ತೆ ಯೋಜನೆ, ಮೇಲ್ಸೇತುವೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಉಲ್ಲೇಖಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net