

ಬೆಂಗಳೂರು: ಟೀಕೆ ಟಿಪ್ಪಣಿಗಳಷ್ಟೇ ಅಲ್ಲ, ವಿಸ್ತೃತ ಮಾಹಿತಿ ನೀಡುವ ಮೂಲಕ ಅಭಿವೃದ್ಧಿ ಮತ್ತು ಆಹಾರ ತಲುಪಿಸುವ ಜನೋಪಯೋಗಿ ಕೆಲಸಗಳೂ ಮಾಧ್ಯಮಗಳ ಜವಾಬ್ದಾರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ರವೀಂದ್ರ ಕಲಾಕ್ಷೇತ್ರದಲ್ಲಿ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಪ್ರಶಸ್ತಿಗಳನ್ನು ಪ್ರಧಾನ ಮಾಡಿ ಅವರು ಮಾತನಾಡಿದರು.
ಆಡಳಿತದ ಚುಕ್ಕಾಣಿ ಹಿಡಿದ ಉಜಕಾರಣಿಗಳ ಬಗ್ಗೆ ಒಳ್ಳೆಯ ಕೆಲಸಗಳಾದಾಗ ಮೆಚ್ಚುಗೆ ವ್ಯಕ್ತಪಡಿಸುವಂತಹ ಸಕಾರಾತ್ಮಕ ಗುಣವೂ ಮುಖ್ಯ. ಪತ್ರಿಕೋದ್ಯಮ ಮತ್ತು ರಾಜಕಾರಣಿಗೆ ಅವಿನಾಭಾವ ಸಂಬಂಧವಿದೆ. ರಾಜಕೀಯ ಇಲ್ಲದೆ ಪತ್ರಿಕೆಗಳಿಲ್ಲ, ಹಾಗೆಯೇ ಪತ್ರಿಕೆಗಳಿಲ್ಲದೆ ರಾಜಕಾರಣಿಗಳು ಇಲ್ಲ. ಆದರೆ, ರಾಜಕಾರಣಿಗಳು ಹೇಗೋ ಬೆಳೆಯಬಹುದು. ಪತ್ರಿಕೋದ್ಯಮದಿಂದ ಜನರಿಗೆ ಅನುಕೂಲವಾಗಬೇಕು ಎಂದರು.
ದತ್ತಿ ನಿಧಿ ಘೋಷಿಸಿದ ಡಾ.ವಿಜಯ ಸಂಕೇಶ್ವರ
ಮಾಧ್ಯಮ ಅಕಾಡೆಮಿಯಿಂದ ಜೀವಮಾನದ ಸಾಧನೆಗಾಗಿ ವಿಶೇಷ ಪ್ರಶಸ್ತಿ ಸ್ವೀಕರಿಸಿದ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ ಡಾ.ವಿಜಯ ಸಂಕೇಶ್ವರ ಅವರು, ಇದೇ ಸಂದರ್ಭದಲ್ಲಿ ದತ್ತಿ ನಿಧಿ ಘೋಷಿಸಿದರು. ವಿಶೇಷ ಪ್ರಶಸ್ತಿಯೊಂದಿಗೆ ನೀಡಲಾಗಿದ್ದ 50 ಸಾವಿರ ರೂ.ಗಳನ್ನು ಅಕಾಡೆಮಿ ದತ್ತಿ ನಿಧಿಗೆ ಸಮರ್ಷಿಸಿದ ಅವರು, ನಿಗದಿತ ಹಣವನ್ನು ಪ್ರಶಸ್ತಿ ಮೊತ್ತದೊಂದಿಗೆ ಸೇರಿಸಿ ದತ್ತಿ ನಿಧಿಗೆ ಕೊಡುವೆ ಎಂದೂ ಪ್ರಕಟಿಸಿದರು.
ಅಕಾಡೆಮಿ ಗೌರವಕ್ಕೆ ಮೆಚ್ಚುಗೆ: ನನ್ನೊಂದಿಗೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ನ ಪ್ರತಿಭೆಗಳು ಪ್ರಶಸ್ತಿ ಸ್ವೀಕರಿಸಿದ್ದು, ಸೂಕ್ತವಾದ ಸ್ಥಳ, ಸೂಕ್ತವಾದವರನ್ನು ಹುಡುಕಿ ಅಕಾಡೆಮಿ ಗೌರವಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಸ್ತಿಯು ಜವಾಬ್ದಾರಿ ಹೆಚ್ಚಿಸಿದ್ದು. ಪುರಸ್ಕೃತರು ಪ್ರಶಸ್ತಿಗೆ ಸೀಮಿತರಾಗುವುದು ಬೇಡ, ದೇಶದ ದಿಕ್ಸೂಚಿ ಬದಲಾಯಿಸುವ ಶಕ್ತಿ ಮಾಧ್ಯಮ ಅವರದ್ದು, ಅಂತಹ ಬದಲಾವಣೆ ಸಂಕಲ್ಪ ಮಾಡೋಣ ಸಂಕೇಶ್ವರ ಸಲಹೆ ನೀಡಿದರು.
ಪತ್ರಿಕೋದ್ಯಮ ನೈಟ್ ವಾಚ್ಮನ್ನಂತೆ
ಪತ್ರಿಕೋದ್ಯಮ ವಾಚ್ ಡಾಗ್ ಅಷ್ಟೇ ಅಲ್ಲ ನೈಟ್ ವಾಚ್ಮನ್ ಕೂಡ ಹೌದು. ಆ ರೀತಿಯ ಒಳ್ಳೆಯ ಕೆಲಸ ಮಾಡಿ. ಪ್ರಶಸ್ತಿಗೆ ಭಾಜನರಾಗಿದ್ದೀರಿ. ಒಳ್ಳೆಯ ಕೆಲಸ ಮಾಡಿದ್ದಕ್ಕೆ ಗುರುತಿಸಿದ್ದಾರೆ. ಪ್ರಶಸ್ತಿಗೆ ಪಾವಿತ್ರ್ಯತೆಯಿದ್ದು, ಇನ್ನಷ್ಟು ಜವಾಬ್ದಾರಿ ಹೆತ್ತಿಸಿದೆ. ವೃತ್ತಿಧರ್ಮವನ್ನು ಇನ್ನಷ್ಟು ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದು ಸಿಎ ಬೊಮ್ಮಾಯಿ ಹೇಳಿದರು. ಸಾವಿರಾರು ವರ್ಷಗಳ ಇತಿಹಾಸವಿರುವ ಪತ್ರಿಕೋದ್ಯಮ ವಿಶ್ವದ ನಾಗರೀಕತೆ ಬೆಳವಣಿಗೆ, ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರವಹಿಸಿದೆ. ಸ್ವಾತಂತ್ರ್ಯಪೂರ್ವದ ಪತ್ರಿಕೋದ್ಯಮದ ಬಗ್ಗೆ ಅಧ್ಯಯನ ಮಾಡಿದರೆ ಅದೊಂದು ಸುವರ್ಣಯುಗವೆಂಬುದು ವೇದ್ಯವಾಗುತ್ತದೆ. ಸ್ವಂತಿಕೆಯೊಂದಿಗೆ ಪತ್ರಿಕಾರಂಗ ಕೆಲಸ ಮಾಡಿದೆ ಎಂದು ತಿಳಿಸಿದರು.
ಬೆವರಿಳಿಸಿದರು!: ಪತ್ರಕರ್ತರ ಪ್ರಶ್ನೆಗಳಿಗೆ ಮುಖ್ಯಮಂತ್ರಿ, ಸಚಿವರು ಬೆವರಿಳಿಸಿದರು ಎಂದು ಮಾಧ್ಯಮಗಳಲ್ಲಿ ಬರುತ್ತಿರುತ್ತದೆ. ಆದರೆ ಇವತ್ತು ಪತ್ರಕರ್ತರಿಗೆ ಪ್ರಶಸ್ತಿ ಕೊಟ್ಟು ಕೊಟ್ಟು ಬೆವರಿಳಿದಿದೆ ಎಂದು ಸಿಎಂ ನಗೆಚಟಾಕಿ ಹಾರಿಸಿದಾಗ ಸಭಾಂಗಣದಲ್ಲಿ ನಗು ಹರಡಿತು. ನಾಲ್ಕು ವರ್ಷಗಳ ಪ್ರಶಸ್ತಿಗಳನ್ನು ಒಂದೇ ಬಾರಿಗೆ ಕೊಟ್ಟಿರುವೆ. ಮಾಧ್ಯಮ ರಂಗದಲ್ಲಿ ಅಪಾರ ಸಂತನ, ತಮ್ಮದೇ ಆದ ಛಾಪು, ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದಕ್ಕೆ ಸಂತಸವಾಗಿದ್ದು, ನನ್ನ ಸೌಭಾಗ್ಯವೂ ಹೌದು ಎಂದರು.
ಸಂಕೇಶ್ವರರ ಸಾಹಸಕ್ಕೆ ಬೊಮ್ಮಾಯಿ ಪ್ರಶಂಸೆ
ಡಾ.ವಿಜಯ ಸಂಕೇಶ್ವರ ಅವರ ಸಾಹಸ ಪ್ರವೃತ್ತಿಯು ಹೊಸ ಓದುಗರನ್ನು ಸೃಷ್ಟಿಸಿದೆ ಎಂದು ಪ್ರಶಂಸಿಸಿದ ಸಿಎಂ ಬೊಮ್ಮಾಯಿ, ಧಾರವಾಡ, ಮೈಸೂರಿನಲ್ಲಿ ಕೆಲಸ ಮಾಡುವ ಅದರಲ್ಲೂ ಗ್ರಾಮೀಣ ಪತ್ರಕರ್ತರ ಪರಿಶ್ರಮ ಗೊತ್ತಿದೆ ಎಂದರು. ಅಕಾಡೆಮಿಯ ಪ್ರಶಸ್ತಿಗೆ ಸೀಮಿತವಾಗದೆ ಸಂಶೋಧನೆ, ತರಬೇತಿ, ಗ್ರಾಮೀಣ ಪತ್ರಕರ್ತರಿಗೆ ಪ್ರೋತ್ಸಾಹ, ಅಂತಾರಾಷ್ಟ್ರೀಯ ಸುದ್ದಿಗಳ ಬಗ್ಗೆ ಮಾಹಿತಿ ಹಂಟುವ ಕೆಲಸವನ್ನೂ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಕಿವಿಮಾತು ಹೇಳಿದರು.
ಪ್ರಶಸ್ತಿ ಪ್ರದಾನ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೂಡ ಮಾಡುವ ಟಿಎಸ್ಆರ್ ಮೊಹರೆ ಹನುಮಂತರಾಯ, ಅಭಿವೃದ್ಧಿ, ಮತ್ತು ಪರಿಸರ ಪತ್ರಿಕೋದ್ಯಮದ ಮೂರು ವರ್ಷ (2016-18)ಗಳ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಜಯವಾಣಿಯ ಎಚ್.ಎಸ್.ರಾಘವೇಂದ್ರ ಗಣಪತಿ, ಪ್ರಭುದೇವ ಶಾಸ್ತ್ರಿಮಠ, ಎನ್.ಡಿ. ಶಾಂತಕುಮಾರ್, ಕೆ.ಎಂ. ಪಂಕಜ, ಬಾಬುರಾವ್ ಯಡ್ರಾಮಿ, ಮುಳ್ಳೂರು ರಾಜು, ಅರವಿಂದ ಅಕ್ಲಾಪುರ, ಆನಂದ್ ಮತ್ತಿಕಟ್ಟಿ, ಬಿ.ಪಿ. ಹರಿಪ್ರಸಾದ್ ರೈ, ದಿಗ್ವಿಜಯ ನ್ಯೂಸ್ ಧರಣೇಶ್, ಬೂಕನಕೆರೆ, ವಿಜಯ್ ಜೊನ್ನಹಳ್ಳಿ ಜೊನ್ನಹಳ್ಳಿ ಸೇರಿ ಮಾಧ್ಯಮ ಅಕಾಡೆಮಿಯ 4 ವರ್ಷ (2019 ರಿಂದ 2022)ಗಳ ಒಟ್ಟು 175 ಸಾಧಕರಿಗೆ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅತ್ಯುತ್ತಮ ಲೇಖನಗಳಿಗೆ ನೀಡುವ ದತ್ತಿ ಪ್ರಶಸ್ತಿ (2019 ರಿಂದ 2022) ಗಳನ್ನು ವಿಜಯವಾಣಿಯ ಹರೀಶ್ ಬೇಲೂರು, ವಿ. ಆರ್. ಶಿವಕುಮಾರ್ ಸೇರಿ 17 ಪತ್ರಕರ್ತರು ಮತ್ತು 3 ಪತ್ರಿಕೆಗಳಿಗೆ ಪ್ರದಾನ ಮಾಡಲಾಯಿತು.
ಸಂಕೇಶ್ವರರ ಅಭಿನಂದನೆ
ಪ್ರಶಸ್ತಿಗೆ ಭಾಜನರಾದ ವಿಜಯವಾಣಿ, ದಿಗ್ವಿಜಯ ಸಿಬ್ಬಂದಿ ಹಾಗೂ ಪ್ರಶಸ್ತಿ ಪುರಸ್ಕೃತ ಎಲ್ಲ ಪತ್ರಕರ್ತರಿಗೆ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಮಾಧ್ಯಮ ಅಕಾಡೆಮಿಯ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಅರ್ಥಿಕ ತಜ್ಞರಾದ ಸುಶೀಲಾ ಸುಬ್ರಮಣ್ಯ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್ ಪ್ರದಾನ ಮಾಡಿದರು. ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್, ಆಯುಕ್ತ ಡಾ.ಪಿ.ಎಸ್.ಹರ್ಷ, ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ, ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಇದ್ದರು.