

ಬೆಂಗಳೂರು: ಪುಲಕೇಶಿ ಎಂಬ ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಸೇವೆ ಸಲ್ಲಿಸಿ, ವಚನ ಸಂಸ್ಕೃತಿಯನ್ನು ಮನೆ-ಮನಗಳಿಗೆ ತಲುಪಿಸುವ ಉದ್ದೇಶದಿಂದ 27 ವರ್ಷಗಳ ಹಿಂದೆ ವಚನ ಜ್ಯೋತಿ ಬಳಗವನ್ನು ಹುಟ್ಟುಹಾಕಿದ್ದ ಹಿರಿಯ ಸಾಹಿತಿ ಕೆ.ಪಿ.ಶಿವಲಿಂಗಯ್ಯ ಜನ್ಮ ದಿನಾಚರಣೆ ಅಂಗವಾಗಿ ಶುಕ್ರವಾರ (ಫೆ.14)ರಂದು ವಿವಿಧ ಸಾಧಕರಿಗೆ ಶಿವಲಿಂಗ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.
ಶುಕ್ರವಾರ ಸಂಜೆ 5.30ಕ್ಕೆ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಉದ್ಘಾಟಿಸಲಿದ್ದು, ಮಾಜಿ ಸಚಿವ ಹಾಗೂ ಶಾಸಕ ಎಂ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕೀಬೋರ್ಡ್ ವಾದಕ ವಿ.ಪುಣ್ಯೇಶ್ ಕುಮಾರ್, ತಬಲಾ ವಾದಕ ಗುರುರಾಜ ಆಚಾರ್ಯ, ರಿದಂ ಪ್ಯಾಡ್ ವಾದಕ ಎ.ಮಹೇಂದ್ರ ಅವರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭದಲ್ಲಿ ವಚನಜ್ಯೋತಿ ಬಳಗದ ಎಸ್.ಪಿನಾಕಪಾಣಿ ಆಶಯ ನುಡಿ ನುಡಿಯಲಿದ್ದಾರೆ. ಹಿರಿಯ ಪತ್ರಕರ್ತ ರವೀದ್ರ ಭಟ್ಟ ‘ವಚನ ರಸದೌತಣ’ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಐಎಎಸ್ ಅಧಿಕಾರಿ ಜಯವಿಭವಸ್ವಾಮಿ, ಕನ್ನಡ ಸಂಸ್ಕೃತಿ ಇಲಾಖೆಯ ಡಾ.ಧರಣೀದೇವಿ ಮಾಲಗತ್ತಿ, ಬಲವಂತರಾವ್ ಪಾಟೀಲ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.