ಪ್ರಯಾಗ್‌ರಾಜ್ : ಇಸ್ಕಾನ್ ಮತ್ತು ವಿಶ್ವಾದ್ಯಂತ ಹರೇ ಕೃಷ್ಣ ಅಭಿಯಾನದ ಸಂಸ್ಥಾಪಕ ಭಕ್ತಿವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರಿಗೆ ಐತಿಹಾಸಿಕ ಮಹಾಕುಂಭಮೇಳದಲ್ಲಿ ಅಖಿಲ ಭಾರತ ಅಖಾಡ ಪರಿಷತ್ತು ‘ವಿಶ್ವಗುರು’ ಬಿರುದು ನೀಡಿ ಗೌರವಿಸಿದೆ.
ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸನಾತನ ಧರ್ಮವನ್ನು ಪರಿಚಯಿಸಿದ್ದಕ್ಕಾಗಿ ಹಾಗೂ ಭಾರತ ಮತ್ತು ವಿದೇಶಗಳಲ್ಲಿ ಇಸ್ಕಾನ್ ಸ್ಥಾಪನೆಯ ಮೂಲಕ ಕೃಷ್ಣಭಕ್ತಿಯನ್ನು ಪಸರಿಸಿದಕ್ಕಾಗಿ ಮಂಗಳವಾರ ನಿರಂಜನಿ ಅಖಾಡದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಗುರು ಬಿರುದನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರಂಜನಿ ಅಖಾಡದ ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜರು, ಪವಿತ್ರ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭ ಉತ್ಸವದಲ್ಲಿ ಶ್ರೀಲ ಪ್ರಭುಪಾದರಂತಹ ಮಹಾನ್ ವ್ಯಕ್ತಿಗಳಿಗೆ 1968 ರ ಹೊತ್ತಿನ್ಲಲೇ ವಿಶ್ವಗುರು ಬಿರುದು ಸಿಗಬೇಕಿತ್ತು, ಆದರೆ ಇಂದು ಸಿಗುತ್ತಿರುವುದಕ್ಕೆ ನಾವುಗಳು ಸಾಕ್ಷಿಯಾಗಿದ್ದು ನಮ್ಮ ಪುಣ್ಯ ಎಂದರು.
ಭಗವದ್ಗೀತೆ ಬಗ್ಗೆ ಅದ್ಭುತವಾದ ಕೆಲಸವನ್ನು ಮಾಡಿರುವ ಶ್ರೀಲ ಪ್ರಭುಪಾದರಿಗೆ ವಿಶ್ವಗುರು ಬಿರುದು ನೀಡುವುದು ಸೂರ್ಯನಿಗೆ ದೀಪ ತೋರಿಸಿದಂತೆ ಎಂದು ಅಖಾಡ ಪರಿಷತ್ ಅಧ್ಯಕ್ಷರಾದ ರವೀಂದ್ರ ಪುರಿ ಜಿ ಮಹಾರಾಜ್ ಹೇಳಿದರು.
ಶ್ರೀಲ ಪ್ರಭುಪಾದರಿಗೆ ವಿಶ್ವಗುರು ಎಂಬ ಬಿರುದನ್ನು ನೀಡಿ ಗೌರವಿಸಿದ್ದಕ್ಕಾಗಿ ಅಖಿಲ ಭಾರತ ಅಖಾಡ ಪರಿಷತ್ತಿಗೆ ಇಸ್ಕಾನ್ ಬೆಂಗಳೂರಿನ ಮುಖ್ಯಸ್ಥ ಮಧು ಪಂಡಿತ್ ದಾಸರು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆಚಾರ್ಯ ಮಹಾಮಂಡಲೇಶ್ವರ ಅವಧೂತ್ ಅರುಣ್ ಗಿರಿಜಿ, ವಿವಿಧ ಅಖಾಡಗಳ ಮಹಾಮಂಡಲೇಶ್ವರರು, ಕಾರ್ಯದರ್ಶಿಗಳು, ಮಹಂತರು, ಇಸ್ಕಾನ್ ಬೆಂಗಳೂರಿನ ಉಪಾಧ್ಯಕ್ಷ ಶ್ರೀಚಂಚಲಪತಿ ದಾಸರು ಮತ್ತು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.