

ನೊಯ್ಡಾ: ಇಲ್ಲಿನ ಸೆಕ್ಟರ್ 115 ಸೆಕ್ಟರ್ನಲ್ಲಿರುವ ಅರ್ಶ ಕನ್ಯಾ ಗುರುಕುಲ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 14 ವರ್ಷದ ವಿದ್ಯಾರ್ಥಿನಿಯೋರ್ವಳು ಜು.3ರಂದು ಮುಂಜಾನೆ ಫ್ಯಾನ್ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಾಲಕಿಯ ತಂಗಿ ಕೂಡ ಇದೇ ವಸತಿ ಶಾಲೆಯಲ್ಲಿಯೇ ಓದುತ್ತಿದ್ದಾಳೆ. ತಂದೆ ತಾಯಿ ಹರಿಯಾಣದಲ್ಲಿ ವಾಸವಾಗಿದ್ದಾರೆ.
ಈ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಈಕೆಯ ತಂಗಿ ಸೇರಿ ಒಟ್ಟು 45 ವಿದ್ಯಾರ್ಥಿಗಳು ಇದ್ದರು. ಹಾಗೇ, ಶಾಲೆಯ ಶಿಕ್ಷಕರು, ಸಿಬ್ಬಂದಿ ಕೂಡ ಅಲ್ಲಿಯೇ ಇದ್ದರು.
ಬಾಲಕಿಯ ಆತ್ಮಹತ್ಯೆ ವಿಚಾರ ಶಾಲಾ ಸಿಬ್ಬಂದಿಗೆ ತಿಳಿಯುತ್ತಿದ್ದಂತೆ ಅವಳ ತಂದೆ-ತಾಯಿ ಹಾಗೂ ಶಾಲೆಯ ಪ್ರಿನ್ಸಿಪಾಲ್ಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ.
ಬೆಳಗ್ಗೆ 10.30ರ ಹೊತ್ತಿಗೆ ವಸತಿ ಶಾಲೆಗೆ ಆಗಮಿಸಿದ ಬಾಲಕಿಯ ತಂದೆ-ತಾಯಿ ಅಲ್ಲಿನ ಸಿಬ್ಬಂದಿ ವಿರುದ್ಧವೇ ಅನುಮಾನ ವ್ಯಕ್ತಪಡಿಸಿದ್ದಾರೆ. ನಾವು ವಸತಿ ಶಾಲೆಯನ್ನು ಪ್ರವೇಶ ಮಾಡುತ್ತಿದ್ದಂತೆ ನಮ್ಮ ಫೋನ್ನ್ನು ಕಿತ್ತುಕೊಳ್ಳಲಾಯಿತು. ನಂತರ ನನ್ನ ಮಗಳು ನೇಣು ಬಿಗಿದುಕೊಂಡಿರುವ ಕೊಠಡಿಗೆ ಕರೆದುಕೊಂಡು ಹೋಗಿ, ಮೃತದೇಹ ತೋರಿಸಿದ್ದಾರೆ. ಹಾಗೇ ಅವಳು ಬರೆದಿಟ್ಟಿದ್ದಾಳೆ ಎಂದು ಒಂದು ಸೂಸೈಡ್ ನೋಟ್ನ್ನು ತೋರಿಸಿದ್ದಾರೆ ಎಂದು ಬಾಲಕಿಯ ಅಮ್ಮ ಹೇಳಿದ್ದಾರೆ.
ಮಗಳ ಮೃತದೇಹಕ್ಕೆ ಕೂಡಲೇ ಅಂತ್ಯಸಂಸ್ಕಾರ ಮಾಡುವಂತೆ ಶಾಲೆಯ ಆಡಳಿತ ನಮಗೆ ಬೆದರಿಕೆ ಹಾಕಿತ್ತು. ಆದರೆ ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸಬೇಕು ಎಂಬುದು ನನ್ನ ಬಯಕೆ. ಯಾಕಾಗಿ ಅವಳು ನೇಣು ಬಿಗಿದುಕೊಂಡಿದ್ದಾಳೆ ಎಂಬ ವಿಚಾರ ಬಹಿರಂಗವಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ‘ಕೊವಿಡ್-19 ಲಸಿಕೆಯನ್ನು ದೇಶದ ಮೂಲೆಮೂಲೆಗೂ ತಲುಪಿಸುವ ಜವಾಬ್ದಾರಿ ರಿಲಯನ್ಸ್ ಸಂಸ್ಥೆಯದ್ದು…’
ಬಾಲಕಿ ಸತ್ತ ಸ್ಥಳದಲ್ಲಿ ನಮಗೆ ಸೂಸೈಡ್ ನೋಟ್ ಸಿಕ್ಕಿದೆ. ಅದರಲ್ಲಿ ಐ ಹೇಟ್ ಮೈ ಲೈಫ್(ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ) ಎಂದು ಬರೆದುಕೊಂಡಿದೆ. ಅವಳ ಸಾವಿಗೆ ಗುರುಕುಲವಾಗಲಿ, ಅವಳ ಕುಟುಂಬದವರಾಗಲೀ ಹೊಣೆಯಲ್ಲ. ನನಗೆ ಬದುಕಲು ಕಾರಣಗಳೇ ಸಿಗುತ್ತಿಲ್ಲ..ಪ್ರತಿಯೊಬ್ಬರಿಗೂ ಹೊರೆಯಾಗಿದ್ದೇನೆ ಎಂದು ಬರೆದಿದ್ದಾಳೆ ಎಂದು ಗುರುಕಲ ಶಾಲೆಯ ಪ್ರಿನ್ಸಿಪಾಲ್ ಜಯೇಂದ್ರ ಅವರು ತಿಳಿಸಿದ್ದಾರೆ.
ಆದರೆ ಬಾಲಕಿಯ ತಾಯಿ ಮಾತ್ರ ಇದ್ಯಾವ ಹೇಳಿಕೆಗಳನ್ನೂ ನಂಬುತ್ತಿಲ್ಲ. ಶಾಲೆ ಈ ವಿಚಾರದಲ್ಲಿ ದಿಕ್ಕುತಪ್ಪಿಸುತ್ತಿದೆ. ಖಂಡಿತ ಆಕೆಯ ಮೇಲೆ ಅತ್ಯಾಚಾರವಾಗಿದೆ. ನಂತರ ಅವಳನ್ನು ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಶಾಲೆಯ ಬಗ್ಗೆ ಅವರು ಆರೋಪ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಬಾಲ ಮಂದಿರದಲ್ಲಿದ್ದ 8 ಹೆಣ್ಣುಮಕ್ಕಳು ರಾತ್ರೋರಾತ್ರಿ 15 ಅಡಿ ಎತ್ತರದ ಗೋಡೆ ಹಾರಿ ಎಸ್ಕೇಪ್!
ಪ್ರಕರಣ ದಾಖಲಿಸಿಕೊಂಡಿರುವ ನೊಯ್ಡಾ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಡೆತ್ ನೋಟ್ ಹಾಗೂ ಕುಟುಂಬದವ ಹೇಳಿಕೆ ಎರಡನ್ನೂ ಆಧರಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)