

ಬೆಂಗಳೂರು: ರಿಷಭ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ 14 ನಿಮಿಷಗಳ ಒಂದೇ ಶಾಟ್ ನೋಡಿದ್ದು ನೆನಪಿರಬಹುದು. ಈಗ ಲೋಕೇಂದ್ರ ಸೂರ್ಯ ಅಭಿನಯದ ಮತ್ತು ನಿರ್ದೇಶನದ 'ಅಥಿ ಐ ಲವ್ ಯೂ' ಚಿತ್ರಕ್ಕೆ 11 ನಿಮಿಷಗಳ ಒಂದೇ ದೃಶ್ಯವನ್ನು ಇತ್ತೀಚೆಗೆ ಚಿತ್ರೀಕರಿಸಲಾಗಿದೆ.
'ಅಥಿ ಐ ಲವ್ ಯೂ' ಚಿತ್ರವು ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರವಾಗಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಒಂದೇ ದಿನದಲ್ಲಿ, ಒಂದು ಮನೆಯಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಗಂಡ-ಹೆಂಡತಿಯ ನಡುವಿನ ಆಪ್ತ ದೃಶ್ಯಗಳು ಇಲ್ಲಿ ಪ್ರಮುಖವಾಗಿರಲಿದೆ.
ಇತ್ತೀಚೆಗೆ 11 ನಿಮಿಷದ ಒಂದು ದೃಶ್ಯವನ್ನು ಒಂದೇ ಟೇಕ್ನಲ್ಲಿ ಚಿತ್ರೀಕರಿಸಲಾಗಿದೆ. ಮನೆಯಲ್ಲೇ ವಿವಿಧ ಕೋನಗಳಲ್ಲಿ ಲೈಟಿಂಗ್ ವ್ಯವಸ್ಥೆ ರೂಪಿಸಿ, ಕ್ಯಾಮೆರಾ ಚಲನೆಗೆ ಪ್ಲಾನ್ ಮಾಡಲಾಗಿತ್ತು. ಅಂದುಕೊಂಡಂತೇ ಈ ದೃಶ್ಯ ಮೂಡಿಬಂದಿದ್ದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಈ ರೀತಿಯ ದೀರ್ಘಾವಧಿಯ ದೃಶ್ಯಗಳು ಚಿತ್ರದುದ್ದಕ್ಕೂ ಮೂಡಿಬರಲಿದೆಯಂತೆ. ಈ ದೃಶ್ಯದಲ್ಲಿ ಲೋಕೇಂದ್ರ ಸೂರ್ಯ ಮತ್ತು ಶ್ರಾವ್ಯಾ ರಾವ್ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡುವ ಲೋಕೇಂದ್ರ ಸೂರ್ಯ, 'ಲೆಂಥಿ ಶಾಟ್ಗಳು ಚಿತ್ರದುದ್ದಕ್ಕೂ ಸಹಜವಾಗಿಯೇ ಕಾಣಸಿಗುತ್ತವೆ. ಕತ್ತರಿಸಿ ಜೋಡಿಸಿದರೂ ಸಿಗದ ಅನುಭವವನ್ನು ಶಾಟ್ ಕಟ್ ಮಾಡದೇಯೇ ಪರದೆಯ ಮೇಲೆ ತರಬೇಕಾದರೆ, ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಭೀತು ಪಡಿಸಬೇಕಾಗುತ್ತದೆ. ಅಂತಹ ಪ್ರಯತ್ನದಲ್ಲಿ ಶ್ರಾವ್ಯ ಅವರು ನನಗೆ ಉತ್ತಮವಾದ ಸಾಥ್ ನೀಡಿದ್ದಾರೆ. ಭಾವನಾತ್ಮಕ ದೃಶ್ಯಗಳನ್ನು ಅಲ್ಲಲ್ಲಿ ಸಣ್ಣ ಶಾಟ್‌ಗಳಾಗಿ ವಿಭಾಗಿಸಿದರೆ, ಭಾವನೆಗಳನ್ನು ಹಿಡಿದಿಡುವುದು ಕಷ್ಟ. ಆದಕಾರಣ ಕೆಲವು ದೃಶ್ಯಗಳನ್ನು ಒಂದೊಂದೇ ಶಾಟ್‌ಗಳಲ್ಲಿ ಚಿತ್ರಿಸುತಿದ್ದೇವೆ. ಅದು ಪ್ರೇಕ್ಷಕರಿಗೆ ಮತ್ತಷ್ಟು ಹಿತವೆನಿಸುತ್ತದೆ' ಎನ್ನುತ್ತಾರೆ.
'ಅಥಿ ಐ ಲವ್ ಯೂ' ಚಿತ್ರ ನಿರ್ದೇಶಿಸಿ ಮತ್ತು ಅದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವುದರ ಜತೆಗೆ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸಹ ಬರೆದಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ನಟಿ ಋತು ಚೈತ್ರ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿರುವುದು ವಿಶೇಷ.