ವಿದ್ಯಾಭ್ಯಾಸ ಬಿಟ್ಟು ಬೀದಿಯಲ್ಲಿ ಸಾಕ್ಸ್​ ಮಾರುತ್ತಿದ್ದ 10 ವರ್ಷದ ಬಾಲಕನಿಗೆ ವಿಡಿಯೋ ಕರೆ ಮಾಡಿದ ಮುಖ್ಯಮಂತ್ರಿ!

punjab boy
Published on

ಲೂದಿಯಾನಾ: ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದಿದ್ದರಿಂದ ಶಾಲೆಗೆ ಹೋಗಲಾಗದೇ ಎರಡನೇ ತರಗತಿಯಲ್ಲಿ ಮದ್ಯಂತರಕ್ಕೆ ಶಾಲೆ ಬಿಟ್ಟಿದ್ದ 10 ವರ್ಷದ ಪಂಜಾಬ್​ ಬಾಲಕನ ನೆರವಿಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಧಾವಿಸಿದ್ದಾರೆ.

ಲೂದಿಯಾನಾದ ಬಾಲಕ ವಂಶ್​ ಸಿಂಗ್ ಎನ್ನುವ ಬಾಲಕ ಶಾಲೆ ಬಿಟ್ಟು ಟ್ರಾಫಿಕ್ ಸಿಗ್ನಲ್​ಗಳಲ್ಲಿ ಸಾಕ್ಸ್​​ಗಳನ್ನು ಮಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ್ದ ಸಿಎಂ ಅಮರಿಂದರ್ ಸಿಂಗ್ ಅಧಿಕಾರಿಗಳ ಮೂಲಕ ಬಾಲಕನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.

ಕೂಡಲೇ ಬಾಲಕನನ್ನು ಶಾಲೆಗೆ ದಾಖಲಿಸಿ, ಸದ್ಯ ಈ ಕರೊನಾದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿಗಳನ್ನು ಕಲಿಯಲು ಮಾಡಿ ಕೊಟ್ಟಿರುವ ಅನುಕೂಲಗಳನ್ನೂ ಈ ವಿದ್ಯಾರ್ಥಿಗೆ ನೀಡಬೇಕು ಎಂದು ಆದೇಶಿಸಿದ್ದಾರೆ. ಅಲ್ಲದೇ ಸಿಎಂ ಅವರು ತಮ್ಮ ವೈಯಕ್ತಿಕವಾಗಿ ಬಾಲಕನ ಕುಟುಂಬಕ್ಕೆ 2 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

ಈ ಕುರಿತು ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮರಿಂದರ್ ಸಿಂಗ್ ಅವರು, ಆರ್ಥಿಕ ಸಮಸ್ಯೆಯಿಂದ ಶಾಲೆ ಬಿಟ್ಟು ಬೀದಿಯಲ್ಲಿ ಸಾಕ್ಸ್​ ಮಾರುವ ಬಾಲಕನ ವಿಡಿಯೋ ಗಮನಿಸಿದ್ದು, ಇದೊಂದು ಬೇಸರದ ಸಂಗತಿಯಾಗಿದೆ. ಆ ಬಾಲಕನನ್ನು ಶಾಲೆಗೆ ಸೇರಿಸುವಂತೆ ಲೂದಿಯಾನಾ ಜಿಲ್ಲಾಧಿಕಾರಿಗೆ ಮಾತನಾಡಿದ್ದೇನೆ. ಆತನ ಕುಟುಂಬಕ್ಕೆ 2 ಲಕ್ಷ ರೂ ನೆರವು ನೀಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net