ವಿಪತ್ತು ನಿರ್ವಹಣೆಗೆ 10 ಕೋಟಿ ಮೀಸಲು: ತುಷಾರ್​ ಗಿರಿನಾಥ್​ ಹೇಳಿಕೆ

tushar Girinath
Published on

ಬೆಂಗಳೂರು: "ಬ್ರ್ಯಾಂಡ್​ ಬೆಂಗಳೂರು' ಪರಿಕಲ್ಪನೆಯಲ್ಲಿ ವಿಪತ್ತು ನಿರ್ವಹಣೆಗೆ 10 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಕ್ರಮ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಬಳಿಕ ಮಾತನಾಡಿದರು. ಪ್ರವಾಹಪೀಡಿತ ಪ್ರದೇಶಗಳಿಗೆ ಅನುದಾನ ಬಳಸಿಕೊಳ್ಳಲಾಗುವುದು. ಆಯಾ ವಲಯಗಳ ಉಪ ವಿಭಾಗಗಳ ಹಂತದಲ್ಲಿಯೇ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಿ ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು, ಮ್ಯಾನ್​ಹೋಲ್​ಗಳು ತೆರೆದುಕೊಳ್ಳುವುದು, ಮರ, ವಿದ್ಯುತ್​ ಕಂಬಗಳು ಬೀಳುವುದನ್ನು ತಡೆಯಬೇಕು. ಆಯಾ ವಲಯಗಳ ಉಪ ವಿಭಾಗಗಳಲ್ಲಿ ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಅಗ್ನಿಶಾಮಕ ಸೇರಿ ಇತರೆ ಇಲಾಖೆಗಳ ಅಧಿಕಾರಿಗಳ ಒಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಾಲ್ಕೆದು ದಿನಗಳಿಂದ ಮಳೆ ಸುರಿಯುತ್ತಿದೆ. ಅಂದಾಜು 150 ಕಡೆ ನಿಂತಿದ್ದ ನೀರು ಸರಾಗವಾಗಿ ಹರಿದುಹೋಗಿದ್ದು, ಯಾವುದೇ ಸಮಸ್ಯೆ ಉಂಟಾಗಿಲ್ಲ. ಬಿದ್ದಿರುವ 325 ಮರಗಳ ಪೈಕಿ 320 ಮರ ತೆರವುಗೊಳಿಸಲಾಗಿದೆ. 698 ರೆಂಬೆ, ಕೊಂಬೆ ಬಿದ್ದಿದ್ದು, 650 ತೆರವುಗೊಳಿಸಲಾಗಿದೆ. ಉಳಿದವನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲಾಗುವುದು. ಈ ಕಾರ್ಯಕ್ಕಾಗಿ 39 ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ವಿಶೇಷ ಆಯುಕ್ತರಾದ ಮುನೀಶ್​ ಮೌದ್ಗಿಲ್​, ಡಾ.ಕೆ. ಹರಿಶ್​ ಕುಮಾರ್​, ಸುರಳ್ಕರ್​ ವಿಕಾಸ್​ ಕಿಶೋರ್​, ಶಿವಾನಂದ ಕಲಕೇರಿ, ವಲಯ ಆಯುಕ್ತರಾದ ಡಾ.ಆರ್​.ಎಲ್​. ದೀಪಕ್​, ವಿನೊತ್​ ಪ್ರಿಯಾ, ರಮೇಶ್​, ಶಿವನಾಂದ್​ ಕಪಾಶಿ, ಸ್ನೇಹಲ್​, ರಮ್ಯಾ, ಪ್ರೀತಿ ಗೆಹ್ಲೋಟ್​ ಮತ್ತಿತರರಿದ್ದರು.

74 ಕಡೆ ಬೇಕಿದೆ ಶಾಶ್ವತ ಪರಿಹಾರ:

ನಗರದಲ್ಲಿರುವ 198 ಪ್ರವಾಹಪೀಡಿತ ಪ್ರದೇಶಗಳ ಪೈಕಿ 124 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ. ಉಳಿದ ಸ್ಥಳಗಳಿಗೆ ವಲಯ ಆಯುಕ್ತರು ಪರಿಶೀಲಿಸಿ, ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸುವ ಕೆಲಸ ಮಾಡಬೇಕು. ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕಿದೆ ಎಂದು ತುಷಾರ್​ ಗಿರಿನಾಥ್​ ಹೇಳಿದರು. 225 ವಾರ್ಡ್​ಗಳಲ್ಲಿ ಸೈಡ್​ ಡೆನ್​ಗಳಲ್ಲಿ ಹೂಳೆತ್ತುವ ಸಲುವಾಗಿ ಪ್ರತಿ ವಾರ್ಡ್​ಗೆ ತಲಾ 30 ಲಕ್ಷ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

ಕೋಟ್​:

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಭಾರತೀಯ ವಿಜ್ಙಾನ ಸಂಸ್ಥೆ ಸಹಯೋಗದಲ್ಲಿ ಪ್ರವಾಹ ತಡೆಗೆ ತಂತ್ರಾನದ ಬಳಸಿಕೊಂಡು ರಾಜಕಾಲುವೆಗಳಲ್ಲಿ 124 ಕಡೆ ನೀರಿನ ಮಟ್ಟ ಅಳೆಯುವ ಸಂವೇದಕ ಅಳವಡಿಸಲಾಗಿದೆ. ಇದನ್ನು ಪಾಲಿಕೆಯ ಇಂಟಿಗ್ರೇಟೆಡ್​ ಕಮಾಂಡಿಂಗ್​ ಕಂಟ್ರೋಲ್​ ಸೆಂಟರ್​ನಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ತುಷಾರ್​ ಗಿರಿನಾಥ್​, ಬಿಬಿಎಂಪಿ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net