

ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಪರಿಸರದಲ್ಲಿ ಬಸವಣ್ಣನ ಕಂಚಿನ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಒಂದು ಕೋಟಿ ರೂ. ದೇಣಿಗೆ ನೀಡುತ್ತಿದ್ದು ಮೂರ್ನಾಲ್ಕು ದಿನಗಳಲ್ಲಿ ಚೆಕ್ ತಲುಪಿಸಲಾಗುವುದು ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ತಿಳಿಸಿದರು.
ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಅವರೊಂದಿಗೆ ಮಂಗಳವಾರ ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು.
ಚಿತ್ರದುರ್ಗದಲ್ಲಿ ಮುರುಘಾಶರಣರು ಬಸವಣ್ಣನ ಮೂರ್ತಿ ಸ್ಥಾಪಿಸುತ್ತಿದ್ದಾರೆಂದು ಕೇಳಿದ್ದೆ. 20-30 ಕೋಟಿ ರೂ. ಖರ್ಚಿರಬಹುದು ಎಂದು ಭಾವಿಸಿದ್ದೆ. ಆದರಿದು ದೊಡ್ಡ ಮೊತ್ತದ ಯೋಜನೆ ಎಂದು ತಿಳಿದ ಬಳಿಕ ಸ್ವ ಇಚ್ಛೆಯಿಂದ ವೈಯಕ್ತಿಕವಾಗಿ 1 ಕೋಟಿ ರೂ. ನೀಡಲು ನಿರ್ಧರಿಸಿದೆ. ಶ್ರೀಗಳು ಧಾರವಾಡದ ಮುರುಘಾಮಠದ ಕಾರ್ಯಕ್ರಮಕ್ಕೆ ಆಗಮಿಸಿದಾಗ ಅವರ ಸಮ್ಮುಖದಲ್ಲಿ ಒಂದು ಕೋಟಿ ರೂ. ನೀಡುವುದಾಗಿ ವಾಗ್ದಾನ ಮಾಡಿದ್ದೆ ಎಂದು ನೆನಪಿಸಿಕೊಂಡರು.
ವೀರಶೈವ ಲಿಂಗಾಯತರು ಮನಸ್ಸು ಮಾಡಿದರೆ ಸರ್ಕಾರಗಳ ನೆರವಿಲ್ಲದೆ ಎರಡು-ಮೂರು ತಿಂಗಳಲ್ಲೇ ಮೂರ್ತಿ ನಿರ್ವಣಕ್ಕೆ ಬೇಕಾದ ಪೂರ್ಣ ಹಣ ಕ್ರೋಡೀಕರಿಸಬಹುದು. ಈ ನಿಟ್ಟಿನಲ್ಲಿ ಬಸವಾದಿ ಶರಣರ ಅನುಯಾಯಿಗಳು ಹಾಗೂ ಬಂಧು-ಭಗಿನಿಯರು ಅವರವರ ಶಕ್ತಾನುಸಾರ ಉದಾರ ನೆರವು ನೀಡಲು ಮನವಿ ಮಾಡಿದರು.
ಆರ್ಥಿಕ ಸಂಪನ್ಮೂಲ ಕೊರತೆಯಿಂದ ಸದ್ಯಕ್ಕೆ ಮೂರ್ತಿ ನಿರ್ಮಾಣ ವಿಳಂಬವಾಗಿರಬಹುದು. ಆದರಿದು ಪೂರ್ಣವಾದ ಬಳಿಕ ಕರ್ನಾಟಕದ ಅದ್ಪುತ ಪ್ರವಾಸಿ ತಾಣವಾಗಿ ಚಿತ್ರದುರ್ಗ ರೂಪುಗೊಳ್ಳಲಿದೆ. ಈಗಾಗಲೇ ಇಲ್ಲಿ ಡಿಆರ್ಡಿಒ ನಂಥ ವೈಜ್ಞಾನಿಕ ಸಂಸ್ಥೆಗಳಿವೆ. ತುಮಕೂರಿಗೆ ಫುಡ್ಪಾರ್ಕ್ ಬಂದಿದೆ. ಮುಂದಿನ ದಿನಗಳಲ್ಲಿ ಇವೆರಡೂ ಪ್ರಾಂತ್ಯಗಳು ರಾಜ್ಯದ ಪ್ರಮುಖ ಸ್ಥಳಗಳಾಗಲಿವೆ ಎಂದರು.
ಮ್ಯೂಸಿಯಂ ವೈಭವಕ್ಕೆ ಅಚ್ಚರಿ
ಮುರುಘಾ ಮ್ಯೂಸಿಯಂ ವೀಕ್ಷಿಸಿ ಅಲ್ಲಿರುವ ವಿರಳ ವಸ್ತುಗಳ ಸಂಗ್ರಹಕ್ಕೆ ವಿಜಯ ಸಂಕೇಶ್ವರ ಅಚ್ಚರಿ ವ್ಯಕ್ತಪಡಿಸಿದರು. ನಾನು ಪ್ರಪಂಚದ ಹಲವು ದೇಶಗಳಲ್ಲಿನ ಹಾಗೂ ಇದಕ್ಕಿಂತಲೂ ದೊಡ್ಡದಾದ ವಸ್ತು ಸಂಗ್ರಹಾಲಯ ನೋಡಿದ್ದೇನೆ. ಆದರೆ ಮುರುಘಾ ಶರಣರು ನಿರ್ವಿುಸಿದ ಮ್ಯೂಸಿಯಂ ವಿಭಿನ್ನವಾಗಿದೆ. ಅಪರೂಪದ ಮತ್ತು ಗುಣಮಟ್ಟದ ಸಂಗ್ರಹಗಳಿಂದ ಕೂಡಿದೆ ಎಂದರು. ಮುರುಘಾವನದಲ್ಲಿ ನಿರ್ವಿುಸಿದ ಬಸವಾದಿ ಶರಣರ ಮೂರ್ತಿಗಳನ್ನು ವೀಕ್ಷಿಸಿ ತುಂಬಾ ಖುಷಿ ಆಯಿತು. ಶ್ರೀಗಳ ದೂರದೃಷ್ಟಿಯ ಫಲವಾಗಿ ಹತ್ತು ಹಲವು ಅಭಿವೃದ್ಧಿ ಕಾರ್ಯ ನಡೆದಿವೆ. ಮಠ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಗತಿ ಜತೆ ಹೆಜ್ಜೆ ಹಾಕುತ್ತಾರೆ
ವಿಶ್ವಗುರು ಬಸವಣ್ಣನ ಎತ್ತರದ ಮೂರ್ತಿ ಸ್ಥಾಪನೆಗೆ ಡಾ.ವಿಜಯಸಂಕೇಶ್ವರ ಕೈ ಜೋಡಿಸಿದ್ದು ನಮಗೆ ಅತೀವ ಖುಷಿ ತಂದಿದೆ. ಇಂಥ ಪ್ರಗತಿಯ ಜತೆಗೆ ಅವರು ಯಾವಾಗಲೂ ಹೆಜ್ಜೆ ಹಾಕುತ್ತಾರೆ ಎಂದು ಮುರುಘಾ ಶರಣರು ತಿಳಿಸಿದರು. ಅಮೆರಿಕದ ಲಿಬರ್ಟಿ ಸ್ಟಾಚ್ಯೂಗಿಂತ ಎತ್ತರದಲ್ಲಿ ಬಸವಣ್ಣನ ಮೂರ್ತಿ ನಿರ್ವಿುಸಿ ಹೊಸ ದಾಖಲೆ ಬರೆಯುವ ಸವಾಲು ನಮ್ಮೆದುರಿಗಿದೆ. ಇದರ ಹಿಂದೆ ಅಷ್ಟೇ ಖರ್ಚು-ವೆಚ್ಚಗಳು ಇವೆ. ಈಗ ವಿಆರ್ಎಲ್ ಮಾಲೀಕರ ಸಹಾಯವೂ ಸಿಕ್ಕಿದೆ. ಅವರ ಕೊಡುಗೆ ನಮ್ಮ ಕಾರ್ಯಕ್ಕೆ ಹೊಸ ಹುಮ್ಮಸ್ಸು ಕೊಟ್ಟಿದೆ ಎಂದರು.
ಮಠದ ಜತೆ 110 ವರ್ಷದ ಸಂಬಂಧ
ಮುರುಘಾಮಠಕ್ಕೂ ನಮ್ಮ ಮನೆತನಕ್ಕೂ 110 ವರ್ಷದ ಸಂಬಂಧವಿದೆ. ಧಾರವಾಡದ ಮುರುಘಾ ಮಠದಲ್ಲಿ ನಮ್ಮ ತಂದೆಯವರಿಗೆ 8 ತಿಂಗಳ ಕಾಲ ವಿದ್ಯಾರ್ಥಿಯಾಗುವ ಸೌಭಾಗ್ಯ ಸಿಕ್ಕಿತ್ತು. ಅವರು ಮೃತ್ಯುಂಜಯಪ್ಪ ಶ್ರೀಗಳನ್ನು ಮನೆಗೆ ಆಮಂತ್ರಿಸಿ ಆಶೀರ್ವಾದ ಪಡೆದಿದ್ದರು ಎಂದು ವಿಜಯ ಸಂಕೇಶ್ವರ ನೆನಪಿಸಿಕೊಂಡರು.
ಸಲಹೆ ಸ್ವೀಕರಿಸಿದ ಶರಣರು
ಬಸವಮೂರ್ತಿ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ 20 ಕೋಟಿ ರೂ. ಘೊಷಿಸಿದ್ದು ಈಗಾಗಲೇ 5 ಕೋಟಿ ರೂ. ಬಿಡುಗಡೆ ಮಾಡಿದೆ. ಇಂಥ ದೊಡ್ಡ ಮೊತ್ತದ ಯೋಜನೆಗೆ ಕೇಂದ್ರ ಸರ್ಕಾರದ ನೆರವು ಪಡೆಯಲು ಡಾ. ವಿಜಯ ಸಂಕೇಶ್ವರ ಅಮೂಲ್ಯ ಸಲಹೆ ನೀಡಿದ್ದು ಅದನ್ನು ಸ್ವೀಕರಿಸಿ ನೆರವು ಪಡೆಯಲು ಮುಂದಿನ ಹೆಜ್ಜೆಗಳನ್ನು ಇಡಲಾಗುವುದು ಎಂದು ಮುರುಘಾ ಶರಣರು ತಿಳಿಸಿದರು. ಇದಕ್ಕೂ ಮುನ್ನ ಸಂಕೇಶ್ವರ ಅವರು ಬಸವಣ್ಣ ಮೂರ್ತಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ತಂತ್ರಜ್ಞರ ಜತೆ ಸಮಾಲೋಚನೆ ನಡೆಸಿದರು. ವೀರಶೈವ ಮುಖಂಡರಾದ ಪಟೇಲ್ ಶಿವಕುಮಾರ್, ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪರಮೇಶ್ವರಪ್ಪ, ಬಸವಪ್ರಭು ಸ್ವಾಮೀಜಿ, ಶಿವಬಸವ ಶ್ರೀ, ಮಲ್ಲಿಕಾರ್ಜುನ ಸ್ವಾಮೀಜಿ, ಶಾಂತಲಿಂಗ ಶ್ರೀ, ಬಸವಕಿರಣ ಸ್ವಾಮೀಜಿ, ಇತರರಿದ್ದರು.